ವಿದ್ಯಾರ್ಥಿಗಳೇ ದೇಶದ ಬಹುದೊಡ್ಡ ಆಸ್ತಿ

19blk1
Published on

ಭಾಲ್ಕಿ: ವಿದ್ಯಾರ್ಥಿಗಳೇ ದೇಶದ ಬಹುದೊಡ್ಡ ಆಸ್ತಿ. ಅವರಲ್ಲಿ ಅಡಗಿರುವ ಸಾಸಬಹುದಾದಂಥ ಕೌಶಲಗಳನ್ನು ಹೊರತರುವಂಥ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಬಡಿಗೇರ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಐಐಟಿ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಜನೆ ಸಮಯದಲ್ಲೇ ಮುಂದೆ ಏನಾಗಬೇಕು ಎಂದು ನಿರ್ಧರಿಸಿ ಸಮಾಜಕ್ಕೆ ಉಪಯುಕ್ತವಾದಂಥ ಕೆಲಸ ಮಾಡಬೇಕು. ಪಾಲಕರು ಮತ್ತು ಶಿಕ್ಷಕರಿಗೆ ಗೌರವ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಈಗಿನಿಂದಲೇ ಅರಿವು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪೂಜ್ಯರು ವಿದ್ಯಾ ದೇಗುಲ ತೆರೆದು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಮಾದರಿ. ಈ ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಡಿ ಭಾಗದಲ್ಲಿ ಎಲ್ಲ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಸದಾಶಯದಿಂದ ಶಿಕ್ಷಣ ಸಂಸ್ಥೆ ತೆರೆದು ಸೂಕ್ತ ವೇದಿಕೆ ಕಲ್ಪಿಸಿದ್ದರ ಪರಿಣಾಮ ಬಡವರು, ಕೂಲಿಕಾರ್ಮಿಕರು, ರೈತರ ಮಕ್ಕಳು ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವುದು ಹೆಮ್ಮೆ ತರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನಿರಂತರ ಓದು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಬೇರಾವ ಕಡೆ ಗಮನಹರಿಸದೆ ತನ್ಮಯತೆ ಮೈಗೂಡಿಸಿಕೊಂಡರೆ ಉತ್ತಮ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಶ್ರೀ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಲೋಕಾಯುಕ್ತ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ಬಸವ ಗುರು ಪೂಜೆ ನೆರವೇರಿಸಿದರು. ಸಂಸ್ಥೆ ಆಡಳಿತಾಧಿಕಾರಿ ಮೋಹನರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ನಿರೂಪಣೆ ಮಾಡಿದರು. ನಾಗೇಶ ಬಿರಾದಾರ್ ವಂದಿಸಿದರು.

ಐಐಟಿ ಸಾಧಕರಿಗೆ ಸನ್ಮಾನ
ಜೆಇಇ ಅಡ್ವಾನ್ಸ್ಡ್ (ಐಐಟಿ) ಪರೀಕ್ಷೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಾದ ವಿನಯ ರಾಮರಾವ್, ದಿನೇಶ ವೈಜಿನಾಥ, ಹರೀಶ ಪಂಡಿತ, ಸಂಜಯ ದಶರಥ, ನಿಖಿಲ್ ಜ್ಞಾನೇಶ್ವರ, ಅನುರಾಧಾ ಅಂಬಿಗರ, ದರ್ಶನಿ ಡಿ.ಕಿಣ್ಣಿ, ಶರಣ ಮಹಾಜನ್, ಅಭಿಷೇಕ ನಾಗಭೂಷಣ, ಮಹಾದೇವ ವಡಗೀರೆ ಮತ್ತು ಸಿದ್ರಾಮ ದುಬಲಗುಂಡೆ ಅವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net