ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಹೆಜ್ಜೆ ಹಾಕಿ

Pratibha Parichay
Published on

ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ಏನಾಗಬೇಕು ಎಂಬ ಸ್ಪಷ್ಟ ಗುರಿ ಇಟ್ಟುಕೊಂಡು ಮುಂದಡಿ ಇಡುವುದರ ಜತೆಗೆ ಸಮಯ ಪಾಲನೆಗೆ ಆದ್ಯತೆ ನೀಡಬೇಕು ಎಂದು ವಿಜಯವಾಣಿ ಕಲಬುರಗಿ ಆವೃತ್ತಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಹೇಳಿದರು.

ವಿದ್ಯಾನಗರ ಕಾಲನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ (ಬೀದರ್ ಉತ್ತರ) ಆಯೋಜಿಸಿದ್ದ ಪ್ರತಿಭಾ ಪರಿಚಯ ಕಾರ್ಯಕ್ರಮ ಉದ್ಘಾಟಿಸಿದ ಅವರು, ಏನು ಬೇಕಾದರೂ ಸಾಸುವಂಥ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ. ಆದರೆ ಮನಸ್ಸು ಮಾಡಬೇಕಷ್ಟೇ. ಸುಶಿಕ್ಷಿತರು, ಅಕ್ಷರ ಬಾರದವರೂ ಅಮೋಘ ಸಾಧನೆ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ ಎಂದರು.

ವಿದ್ಯಾರ್ಥಿಗಳು ಓದಿನತ್ತ ಗಮನ ಕೇಂದ್ರೀಕರಿಸಲು ಮೊಬೈಲ್ ನಿಂದ ದೂರ ಇರಬೇಕು. ವಿವಿಧ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದ ಬಹುತೇಕರು ಮೊಬೈಲ್ ನಿಂದ ದೂರ ಉಳಿದವರೇ ಆಗಿದ್ದಾರೆ. ಖರೀದಿ ಮಾಡದ ಏಕೈಕ ವಸ್ತು ಸಮಯ. ಹೀಗಾಗಿ ಮಕ್ಕಳು ಶೈಕ್ಷಣಿಕ ಜೀವನದಲ್ಲಿ ಸಮಯಕ್ಕೆ ಆದ್ಯತೆ ನೀಡಿದರೆ ಗುರಿ ಮುಟ್ಟಬಹುದು ಎಂದು ಕಿವಿಮಾತು ಹೇಳಿದರು.

ಕಸಾಪ ಪ್ರತಿಭಾ ಪರಿಚಯ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಪ್ರತಿಭಾ ಪರಿಚಯ ಕಾರ್ಯಕ್ರಮ ಪ್ರತಿಭೆಗಳ ಪರಿಚಯಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಎನ್.ಬಿ. ರೇಣುಕಾ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಾತೃಭಾಷೆ ಪಾತ್ರ ಬಹಳ ಪ್ರಮುಖವಾಗಿದೆ. ಮಾತೃಭಾಷೆ ಎಂದರೆ ಹೃದಯ, ತಾಯಿ ಭಾಷೆ. ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಕಸಾಪ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ್ ಮಾತನಾಡಿ, ಕರೊನಾ ಕಾರಣ ಎರಡು ವರ್ಷ ಪ್ರತಿಭಾ ಪರಿಚಯ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದೀಗ ಸೋಂಕು ಕಮ್ಮಿಯಾಗಿದ್ದರಿಂದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ತಿಂಗಳಿಗೊಂದು ಪ್ರತಿಭಾ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀಜಾಮಾತಾ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಸತೀಶ ಮುಳೆ ಮಾತನಾಡಿ, ಮಾತೃಭಾಷಾ ಶಿಕ್ಷಣದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಬಹುದು. ಇಂದಿನ ಅಂಕ ಶಿಕ್ಷಣದೊಂದಿಗೆ ಮಕ್ಕಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಶಿಸ್ತು, ಸಮಯಕ್ಕೆ ಆದ್ಯತೆ ನೀಡಬೇಕು ಎಂದರು.

ಪ್ರಮುಖರಾದ ರೇವಣಸಿದ್ದಪ್ಪ ಪಾಟೀಲ್, ವಿಲಾಸ ಪಾಟೀಲ್, ಸಂತೋಷ ಮಂಗಳೂರೆ, ವಾಸುದೇವ ರಾಠೋಡ್, ಮಲ್ಲಿಕಾರ್ಜುನ ಬೆಂಬಳಗೆ, ರಾಜಕುಮಾರ ಗಾದಗೆ, ಆನಂದ ಜಾಧವ್, ಸಂಜಯ ಪಾಟೀಲ್, ನಾಗರತ್ನ ಜಮಾದಾರ್, ಮೋಹನ್ ಜೋಶಿ, ಅನೀಲಕುಮಾರ ರಾಮರತನ್, ಅರ್ಜುನ ಧೂಳೆ, ಭೀಮಶಾ ಈರಣ್ಣ, ಬಸವರಾಜ, ಗಾಯತ್ರಿ, ಸುರೇಶ ಉಪಸ್ಥಿತರಿದ್ದರು. ತಾನಾಜಿ ನಿರಗುಡೆ ನಿರೂಪಣೆ ಮಾಡಿದರು. ಮೋಹನ್ ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net