ವಿದ್ಯಾರ್ಥಿಗಳು ಸುಸಂಸ್ಕೃತರಾಗಲಿ

6 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೈತಿಕ ತಳಹದಿ ಮೇಲೆ ನೀಡುವ ಶಿಕ್ಷಣ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುತ್ತದೆ. ವಿನಯವಿಲ್ಲದ ವಿದ್ಯೆಗೆ ಯಾವುದೇ ಮಹತ್ವವಿಲ್ಲ. ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು, ಸುಸಂಸ್ಕೃತರಾಗಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಇಲ್ಲಿನ ವಿದ್ಯಾಗಿರಿ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಹೊಂದಿರಬೇಕು. ಅಂಕಗಳಿಕೆಯೇ ವಿದ್ಯಾಭ್ಯಾಸದ ಮೌಲ್ಯಾಂಕನ ಆಗಬಾರದು ಎಂದರು.
ಕೃಷ್ಣನ ಜಾಣ್ಮೆ, ಸ್ನೇಹಪರತೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ರೀತಿಯ ಆಚರಣೆಗಳು ನಮ್ಮ ಭವ್ಯ ಭಾರತದ ಪರಂಪರೆ, ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತವೆ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಈ ರೀತಿ ಆಚರಣೆಗಳು ಕ್ಷೀಣಿಸುತ್ತಿವೆ. ಸಂಸ್ಕೃತಿ, ಪರಂಪರೆ ಪರಿಚಯ ಇಂದಿನ ಅಗತ್ಯವಾಗಿದೆ ಎಂದರು.
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ರಾಧಾ-ಕೃಷ್ಣರ ವೇಷ ಧರಿಸಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮೆರವಣಿಗೆ ಜರುಗಿತು. ಶ್ರೀಕೃಷ್ಣನ ತೊಟ್ಟಿಲೋತ್ಸವ, ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಮಾಡಲಾಯಿತು. ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಶಾಲೆ ಪ್ರಾಚಾರ್ಯೆ ಸಾಧನಾ ಎಸ್., ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net