

ಬಸವಕಲ್ಯಾಣ: ಭಾರತ ವಿಶ್ವಗುರು ಆಗಬೇಕಾದರೆ ವಿದ್ಯಾರ್ಥಿಗಳು ಯೋಜಿಸುವ ಧಿಕ್ಕೆ ಬದಲಾಯಿಸಿಕೊಳ್ಳಬೇಕು. ಸಾಧನೆಯ ಕಿಚ್ಚು ಬೆಳೆಸಿಕೊಂಡು ಪ್ರಯತ್ನವಾದಿಗಳಾಗಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ತಾಲೂಕು ಆಡಳಿತದಿಂದ ನಗರದ ರಥ ಮೈದಾನದ ಬಿಕೆಡಿಬಿ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾನ್ಯ ಬಡ ಕುಟುಂಬದಿಂದ ಬಂದವರೇ ಸಾಧಕರ ಸಾಲಿನಲ್ಲಿದ್ದಾರೆ. ಯುವಕರು, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣುವ ಜತೆಗೆ ಇದರ ಸಾಕಾರಕ್ಕಾಗಿ ಶ್ರಮಿಸಬೇಕು. ಸಾಧನೆ ಮಾಡುವ ಮೂಲಕ ಕಲ್ಯಾಣಕ್ಕೆ ಕೀರ್ತಿ ತರಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಮುಕುಲ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಮಹತ್ವದ ಜವಾಬ್ದಾರಿ ಇದೆ. ಉತ್ತಮ ಶಿಕ್ಷಣ ಪಡೆಯಬೇಕು. ಜ್ಞಾನ ವೃದ್ಧಿಸಿಕೊಳ್ಳಬೇಕು. ಭವಿಷ್ಯದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ತಮ್ಮ ಕೊಡುಗೆ ನೀಡುವಂತಾಗಬೇಕು ಎಂದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ನಗರಸಭೆಯ ಅಧ್ಯಕ್ಷ ಎಂಡಿ ಸಗಿರೋದ್ದಿನ್ ಮಾತನಾಡಿದರು.
ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸರಡಗಿ ಅನ್ನಪೂಣೇಶ್ವರ ಶಾಲೆ ವಿದ್ಯಾರ್ಥಿನಿ ಪವಿತ್ರಾ ಪ್ರಕಾಶ ಹಾಗೂ ಜೀಜಾಮಾತಾ ಶಾಲೆ ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಭಾಷಣ ಮಾಡಿ ಗಮನ ಸೆಳೆದರು.
ತಾಪಂ ಇಒ ರಮೇಶ ಸುಲ್ಫಿ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್ ಇತರರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು. ವಿದ್ಯಾರ್ಥಿಗಳಿಗೆ ಶಾಸಕರಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಧ್ವಜಾರೋಹಣ: ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆಯಿಂದ ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ರಥ ಮೈದಾನದ ವರೆಗೆ ಪ್ರಭಾತ್‌ಫೇರಿ ಜರುಗಿತು. ಕೋಟೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ರಥಮೈದಾನದ ಸಭಾ ಭವನದ ಬಳಿ ದ್ವಜಾರೋಹಣ ನೆರವೇರಿಸಲಾಯಿತು.