

ಹಾಸನ: ವಿದ್ಯಾರ್ಥಿಗಳು ಸೇರಿಂದತೆ ಎಲ್ಲಾರು ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದವರು ಜ್ಞಾನದ ಭಂಡಾರ ಹೊಂದಿದ್ದಲ್ಲಿ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜ್ಞಾನ ಎಂದಿಗೂ ನಮ್ಮ ಕೈ ಬಿಡುವುದಿಲ್ಲ, ಆದ್ದರಿಂದ ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ನೈತಿಕ ಶಿಕ್ಷಣ ಪಡೆಯುವುದು ಬಹಳ ಮುಖ್ಯ, ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕಾರವೂ ಮುಖ್ಯ ಅದೆಷ್ಟೋ ಮಂದಿ ಉತ್ತಮ ಅಂಕ ಗಳಿಸಿದ್ದರೂ ವ್ಯವಹಾರಿಕ ಜ್ಞಾನದ ಕೊರತೆ ಕಾರಣದಿಂದ ಹಿನ್ನಡೆ ಅನುಭವಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲೇ ಮಕ್ಕಳು ವ್ಯವಹಾರಿಕ ಜ್ಞಾನ ಹಾಗೂ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಪಾಲುದಾರರಾಗುವ ಶಿಕ್ಷಕರು, ಸ್ನೇಹಿತರು, ತಂದೆ, ತಾಯಿ, ಎಲ್ಲರೂ ಗುರುಗಳೇ ಆಗಿರುತ್ತಾರೆ, ಅವರೆಲ್ಲರ ಸಲಹೆ ಸೂಚನೆ ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒಳ್ಳೆಯ ಮಾರ್ಗದರ್ಶನ ನೀಡಿರುತ್ತಾರೆ ಎಂದರು.
ದ್ವಿತೀಯ ಪಿಯುಸಿ ಅಂತಿಮ ಘಟ್ಟದಲ್ಲಿರುವ ತಮ್ಮ ಜೀವನದಲ್ಲಿ ಪರೀಕ್ಷೆ ಎಂಬ ಮಹಾದ್ವಾರ ಇದೀಗ ತಮ್ಮ ಮುಂದೆ ಎದುರಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಮುಂದಾಗಬೇಕು. ಗುರುವಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿದೆ. ತಮ್ಮ ಭವಿಷ್ಯಕ್ಕೆ ಅನುಕೂಲ ಆಗುವ ಪೂರಕ ವಾತಾವರಣವನ್ನು ಧಾರೆ ಎರೆದಿರುವ ಗುರುಗಳಿಗೆ ವಂದನೆ ಸಲ್ಲಿಸುವ ಈ ಸುದಿನ ತಮ್ಮ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳು ಹೊರಗಿನ ಸೌಂದರ್ಯಕ್ಕಿಂತ ಒಳಗಿನ ವ್ಯಕ್ತಿತ್ವ ಸೌಂದರ್ಯಕ್ಕೆ ಮಹತ್ವ ನೀಡುವ ಜೊತೆಗೆ ಒಳಗಿನ ಸೌಂದರ್ಯ ವೃದ್ಧಿಗೆ ಗಮನ ಹರಿಸಬೇಕು. ಜೊತೆಗೆ ಅಂಕ ಗಳಿಕೆಯಿಂದ ಪಡೆಯುವ ಪದವಿಗಿಂತ ಒಳ್ಳೆಯ ವ್ಯಕ್ತಿತ್ವ ಅಳವಡಿಸಿಕೊಳ್ಳುವ ಪದವಿ ಪಡೆದು ಸತ್ಪ್ರಜೆಗಳಾಗಿ ಬಾಳಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಶಾಲೆಯ ಮುಖ್ಯ ಶಿಕ್ಷಕ ದರ್ಶನ್ ಇತರರು ಇದ್ದರು.