ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿಯೂ ಶ್ರೀಮಂತರಾಗಲಿ: ಟಿ.ಎನ್. ಸೀತಾರಾಮ್

mysore
Published on

ಮೈಸೂರು: ವಿದ್ಯಾರ್ಥಿಗಳು ಮೌಲ್ಯಯುತವಾದ ಶಿಕ್ಷಣ ಪಡೆಯುವುದರೊಂದಿಗೆ ಸಾಂಸ್ಕೃತಿಕವಾಗಿಯೂ ಶ್ರೀಮಂತರಾಗಬೇಕು ಎಂದು ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಪರಂಪರೆಯನ್ನು ಪರಿಚಯಿಸಿ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಸಮುದಾಯದ ಒಳಗೆ ಸಹಬಾಳ್ವೆಯ ಸಂಬಂಧವನ್ನು ಕಲ್ಪಿಸುತ್ತವೆ

ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಅನಿವಾರ್ಯವಾಗಿವೆ. ಇದು ಮನುಷ್ಯನಲ್ಲಿ ಮನುಷ್ಯತ್ವವನ್ನು ಸದಾ ಜಾಗೃತವಾಗಿಡುತ್ತವೆ ಎಂದರು. ಸುಖ, ಸಂತೋಷ ಆನಂದಗಳನ್ನು ಮನುಷ್ಯ ಹೇಗೆ ಅನುಭವಿಸುತ್ತಾನೆ ಎಂಬುದು ಮುಖ್ಯ.

ಒಂದು ಸಮಾಜದಲ್ಲಿ ಇರುವ ನಾಗರಿಕರ ನೈತಿಕ ಪ್ರಜ್ಞೆಯಿಂದ ಮೂಡುವ ಆನಂದವೇ ಅಮೂಲ್ಯವಾಗಿರುತ್ತದೆ. ಅದರಿಂದ ಸಮಾಜಕ್ಕೆ ಹೆಚ್ಚು ಉಪಯೋಗ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಇದು ಸಾಧ್ಯವಾಗುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಕ್ತಿಯನ್ನು ತುಂಬುತ್ತವೆ. ಆರೋಗ್ಯವಂತ ದೇಹ, ಮನಸ್ಸನ್ನು ಕಾಪಾಡಿಕೊಳ್ಳಲು ಇದು ಸಹಕಾರಿಯಾಗಿವೆ. ಪ್ರತಿಭೆ, ನೈಪುಣ್ಯತೆ, ಆತ್ಮವಿಶ್ವಾಸವನ್ನು ಮೂಡಿಸುತ್ತವೆ ಎಂದು ಹೇಳಿದರು.

ಶಿಕ್ಷಣಕ್ಕೆ ಔದ್ಯೋಗಿಕ ಮತ್ತು ಔದ್ಯಮಿಕ ಆಯಾಮಗಳು ಇರುವಂತೆ ವಿದ್ಯಾರ್ಥಿಗಳಲ್ಲಿ ಗೆಲುವು, ಚೈತನ್ಯ, ಆತ್ಮವಿಶ್ವಾಸ, ಜೀವಪರ ಕಾಳಜಿ ಮತ್ತು ಆಶಾದಾಯಕ ಬದುಕನ್ನು ಕಾಣಲು ಸಾಂಸ್ಕೃತಿಕ ಆಯಾಮವೂ ಅತ್ಯಗತ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಶಿಕ್ಷಣದ ಆರಂಭದಿಂದ ಅಂತ್ಯದವರೆಗೂ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳು ಮಹತ್ವ ಪಡೆದುಕೊಂಡಿವೆ. ಸಾಂಸ್ಕೃತಿಕ ಅಭಿರುಚಿ ಬೆಳೆಸಲು ಇಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ಸಹಾಯಕವಾಗಿವೆ. ಅತ್ಯುತ್ತಮ ಪ್ರತಿಭೆಗಳೂ ಹೊರಹೊಮ್ಮಿವೆ. ಈ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹದಿಂದ ಭಾಗವಹಿಸಬೇಕು ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಮೊಬೈಲ್ ಮತ್ತು ಇತರ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಐಎಎಸ್ ಅಧಿಕಾರಿಯಾಗುವ ಮಟ್ಟಕ್ಕೆ ಏರಿದ ಕೇರಳದ ರೈಲ್ವೆ ನಿಲ್ದಾಣದಲ್ಲಿ ಕೂಲಿ ಶ್ರೀನಾಥ್ ನಮಗೆ ನಿದರ್ಶನವಾಗಿದ್ದಾರೆ. ಬದುಕಿನಲ್ಲಿ ಕನಸು ಮತ್ತು ಸರಿಯಾದ ಗುರಿಗಳು ಇರಬೇಕು ಎಂದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ಎಂ.ಪಿ. ಸೋಮಶೇಖರ್, ಕ್ರೀಡಾ ವೇದಿಕೆಯ ಸಂಚಾಲಕ ಎಂ. ಕಾರ್ತಿಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net