ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕತೆ ಅಳವಡಿಸಿಕೊಳ್ಳಿ

14ss1kanta matu
ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸಕ ಕಾಂತ ಮಾತನಾಡಿದರು. ಇ.ಎಂ.ದಯಾನಂದ್, ಚಂದ್ರಶೇಖರ್‌ಮೂರ್ತಿ, ಎನ್.ಎಂ.ಹರೀಶ್, ಮೋಹನ್, ರಾಜಶೇಖರ್, ಪೊನ್ನಪ್ಪ ಇದ್ದರು.
Published on

ಶನಿವಾರಸಂತೆ: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ನೈತಿಕತೆ, ಸಂಸ್ಕಾರ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮುಂದೆ ಸಮಾಜದಲ್ಲಿ ಗೌರವ, ಸ್ಥಾನಮಾನ ಗಳಿಸಲು ಸಾಧ್ಯ ಎಂದು ಶನಿವಾರಸಂತೆ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎ.ಕಾಂತ ಅಭಿಪ್ರಾಯಪಟ್ಟರು.

ಸ್ಥಳೀಯ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತಿ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು

ಶಿಕ್ಷಣ ಪಡೆದ ವ್ಯಕ್ತಿಗೆ ಗೌರವ ಸಿಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜೊತೆಯಲ್ಲಿ ಸ್ವಂತಿಕೆ, ನೈತಿಕತೆಯ ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪದವಿ ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆ ಬಿಟ್ಟು ಆಸಕ್ತಿ ಇರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗುವ ರೀತಿಯನ್ನು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಉಪನ್ಯಾಸಕ ಎ.ಎಚ್.ಚಂದ್ರಕಾಂತ್ ಮಾತನಾಡಿ, ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಮಾರ್ಗದರ್ಶಕರಾದರೆ ಮುಂದೆ ಕಿರಿಯ ವಿದ್ಯಾರ್ಥಿಗಳು ನಿಮ್ಮ ಮಾತನ್ನು ಅನುಸರಿಸುತ್ತಾರೆ. ಪದವಿ ಶಿಕ್ಷಣ ಪಡೆಯವುದು ಸಲುಭದ ಮಾತಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ಗೌರವ, ಶಿಸ್ತು ಸಂಯಮದಿಂದ ವರ್ತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಇ.ಎಂ.ದಯಾನಂದ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಚಂದ್ರಶೇಖರ್‌ಮೂರ್ತಿ, ಎನ್.ಎಂ.ಹರೀಶ್, ಮೋಹನ್, ರಾಜಶೇಖರ್, ಪೊನ್ನಪ್ಪ, ಎಚ್.ಎಂ.ವಿವೇಕ್, ಶೋಭಾ, ಆಶಿಕಾ, ವೇದಕುಮಾರ್ ಹಾಜರಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net