

ಕೊಡಗು : ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸುವ ಮೂಲಕ ಜೀವನದಲ್ಲಿ ಗುರಿ ಮುಟ್ಟಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.
ವಿರಾಜಪೇಟೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಗತಿ ಶಾಲಾ ಆಡಳಿತ ಮಂಡಳಿ ವತಿಯಿಂದ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಹೊರಗಿನ ಪ್ರಪಂಚದ ಅರಿವು ಅಗತ್ಯ. ಇಂದಿನ ಆಧುನಿಕ ಯುಗದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಗುರು, ಹಿರಿಯರಿಗೆ ಗೌರವ ನೀಡುವ ಮೂಲಕ ಅವರಿಂದ ಉತ್ತಮ ಶಿಕ್ಷಣ ಪಡೆಯಲು ಪ್ರಯತ್ನಿಸಬೇಕು. ಶಿಕ್ಷಕರು ಮತ್ತು ಪಾಲಕರು ಮಕ್ಕಳ ಮನಸ್ಸನ್ನು ಅರಿತುಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಮಾತನಾಡಿ, ವಿರಾಜಪೇಟೆ ತಾಲೂಕಿನ ವಿದ್ಯಾರ್ಥಿಗಳು ಕಳೆದ 4 ವರ್ಷಗಳಿಂದ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದಾರೆ. ರಾಜ್ಯದಲ್ಲಿ ಕೊಡಗು ಜಿಲ್ಲೆ ಕಳೆದ ಸಾಲಿನಲ್ಲಿ 14ನೇ ಸ್ಥಾನದಲ್ಲಿತ್ತು. ಈ ವರ್ಷ 9ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಮುಂದಿನ ವರ್ಷ 5ನೇ ಸ್ಥಾನಕ್ಕೆ ಬರುವಂತಾಗಬೇಕು ಎಂದರು.
ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ವಿ.ವೈಷ್ಣವಿ, ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ದೀತ್ಯಾ ದೇಚಮ್ಮ, ಗೋಣಿಕೊಪ್ಪಲು ಸಂತ ಥಾಮಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಎಂ.ಶಾಹಿರಾ, ಟಿ.ಶೆಟ್ಟಿಗೇರಿ ರೂಟ್ಸ್ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರಾವ್ಯಾ ಚೋಂದಮ್ಮ ಅವರನ್ನು ಸನ್ಮಾನಿಸಲಾಯತು.
ವಿದ್ಯಾಸಂಸ್ಥೆಯ ಮುಖ್ಯಸ್ಥ ಮಾದಂಡ ಎಸ್.ಪೂವಯ್ಯ, ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಅಯ್ಯಪ್ಪ ಇತರರು ಇದ್ದರು.