ವಿದ್ಯಾರ್ಥಿಗಳು ಮಾದರಿ ಪ್ರಜೆಗಳಾಗಿ: ನಿವೃತ್ತ ಏರ್ ಕಮಾಂಡರ್ ಜಯಸಿಂಹ

12
Published on

ಮೈಸೂರು: ವಿದ್ಯಾರ್ಥಿಗಳು ಮಾದರಿ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ನಿವೃತ್ತ ಏರ್ ಕಮಾಂಡರ್ ಆರ್.ಎನ್.ಜಯಸಿಂಹ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್(ಎಸ್‌ವಿವೈಎಂ) ವತಿಯಿಂದ ವಿವೇಕ ಸ್ಕಾಲರ್ ಪ್ರೋಗ್ರಾಂಗೆ ಆಯ್ಕೆಯಾದ ವಿದ್ಯಾರ್ಥಿಗಳಿಗಾಗಿ ಹೆಬ್ಬಾಳದಲ್ಲಿರುವ ವಿ-ಲೀಡ್ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನದ ‘ಯುವಪಯಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಬೆರೆತು ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ಈ ರೀತಿ ಒಡನಾಟದಿಂದ ಜ್ಞಾನಾರ್ಜನೆ ಇನ್ನಷ್ಟು ಉನ್ನತೀಕರಣಗೊಳ್ಳುತ್ತದೆ. ಚರ್ಚೆ- ಸಂವಾದದಿಂದ ಹೊಸ ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವೈದ್ಯ, ಇಂಜಿನಿಯರ್, ವಿಜ್ಞಾನಿ ಹೀಗೆ ಎಲ್ಲರೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ. ಮೊದಲು ತಮ್ಮ ಕರ್ತವ್ಯ ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ಕರ್ತವ್ಯ ಪಾಲನೆ ಮಾಡಬೇಕು. ಇದರಿಂದ ಉತ್ತಮ ದೇಶ ರೂಪಗೊಳ್ಳಲು ಸಾಧ್ಯ. ಗುರಿ ಸಾಧನೆಗೆ ಶಿಸ್ತು ಮತ್ತು ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ. ಜತೆಗೆ, ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ತತ್ವಾದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು

ಎಸ್‌ವಿವೈಎಂ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ್ ಮಾತನಾಡಿ, ಉತ್ತಮ ವ್ಯಕ್ತಿತ್ವ, ಉಜ್ವಲ ಭವಿಷ್ಯ ಕಂಡುಕೊಳ್ಳಲು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತೀಕರಣಗೊಳ್ಳಬೇಕು. ಬಳಿಕ ತಾವು ಪಡೆದುಕೊಂಡ ಸೌಲಭ್ಯವನ್ನು ಮರಳಿ ಸಮಾಜಕ್ಕೆ ಉಚಿತವಾಗಿ ನೀಡಬೇಕು ಎಂದರು.
ವಿದ್ಯಾರ್ಥಿಗಳು ಮೊದಲು ಉತ್ತಮ ನಾಗರಿಕರಾಗಬೇಕು. ಅದಕ್ಕಾಗಿ ಶಿಕ್ಷಣದೊಂದಿಗೆ ಮೌಲ್ಯವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕಾಗಿದೆ. ಎಲ್ಲರೂ ಓದಿನಲ್ಲಿ ರ‌್ಯಾಂಕ್ ಗಳಿಸಲು ಆಗಲ್ಲ. ಆದರೆ, ಸತ್ಪ್ರಜೆ ಆಗಲು ಸಾಧ್ಯವಿದೆ. ಇದುವೇ ಸಮಾಜದ ನಿರೀಕ್ಷೆ ಆಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಪ್ರಯತ್ನಿಸಬೇಕು ಎಂದರು.

ಎಸ್‌ವಿವೈಎಸ್ ವತಿಯಿಂದ ಒಂದು ದಶಕದಿಂದ ವಿವೇಕ ವಿಶಾರದ ಕಾರ್ಯಕ್ರಮದಡಿ 2 ಸಾವಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ಪ್ರಸ್ತಕ ಸಾಲಿನಲ್ಲಿ ಈ ಕಾರ್ಯಕ್ರಮಕ್ಕಾಗಿ 4,500 ಅರ್ಜಿಗಳು ಬಂದಿದ್ದವು. ಈ ಪೈಕಿ 131 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉತ್ತಮ ಕಾಲೇಜಿನಲ್ಲಿ ಓದಿಸಲಾಗುತ್ತಿದೆ ಎಂದು ತಿಳಿಸಿದರು.

ಎಸ್‌ವಿವೈಎಂನ ಸ್ವಯಂಸೇವಕಿ ಸುಮಾ ಮಹೇಶ್‌ಕುಮಾರ್ ಅವರು ಶ್ರಮ ಮತ್ತು ಅದರ ಮಹತ್ವ ಕುರಿತು ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಧಾರವಾಡದ ಹಂಚಿನಮನಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಐಶ್ವರ್ಯ ಕೆ.ಚಂದುನವರ, ಪಾಲಕರ ಪ್ರತಿನಿಧಿಯಾಗಿ ಜಯಶ್ರಿ ಆರ್.ಪತ್ತಾರ ಅನಿಸಿಕೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net