ವಿದ್ಯಾರ್ಥಿಗಳು ಬಾಹ್ಯಾಕಾಶದ ಆಸಕ್ತಿ ಬೆಳೆಸಿಕೊಳ್ಳಿ

23 YERRISWAMY 04
Published on

ಬಳ್ಳಾರಿ : ವಿದ್ಯಾರ್ಥಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು, ದೇಶದ ತಾಂತ್ರಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಜಿಪಂ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಯಾಹಾಕಾಶ ಅಧ್ಯಯನ ಕುರಿತಂತೆ ಯಾವುದೇ ಒಂದು ಯೋಜನೆಯ ಯಶಸ್ಸಿನ ಹಿಂದೆ ಹಲವಾರು ವಿಜ್ಞಾನಿಗಳ ಪೂರ್ವ ತಯಾರಿ, ಅವರ ಕಠಿಣ ಪರಿಶ್ರಮ ಅಡಗಿದೆ. ಅವರ ಬದುಕು ವಿಶಿಷ್ಟವಾದುದು ಎಂದು ಬಣ್ಣಿಸಿದರು. ಇಂದಿನ ಯುವಪೀಳಿಗೆಯು ಸಾಧನೆಯ ಗುರಿ ಇಟ್ಟುಕೊಂಡು ಯಶಸ್ಸಿನ ಪಥದಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಇಸ್ರೋ ವಿಜ್ಞಾನಿ ವಿ.ಚಂದ್ರಬಾಬು ಮಾತನಾಡಿ, ರಾಷ್ಟ್ರೀಯ ಬಾಹ್ಯಾಕಾಶ ದಿನವು ಸಾಧನೆಗಳ ಸ್ಮರಣೆ ಮತ್ತು ಭವಿಷ್ಯದ ಅನ್ವೇಷಣೆಗಳ ಮಹತ್ವವನ್ನು ಸಾರಲು ಮುಖ್ಯವಾಗಿದೆ. ಚಂದ್ರಯಾನ-3ರ ಅವಿಸ್ಮರಣೀಯ ಸಾಧನೆಯ ಮೂಲಕ ಭಾರತ ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ರಾಷ್ಟ ಎಂಬ ಗೌರವ ಸಂಪಾದಿಸಿದೆ. ಇದರ ಜತೆಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಆ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿತು. ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಳಿಕ, ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಕಾರ್ಯಾಚರಿಸಿ, ಚಂದ್ರಯಾನ-3 ಯೋಜನೆಯ ಯಶಸ್ಸಿಗೆ ಇನ್ನೊಂದು ಗರಿ ಮೂಡಿಸಿತು. ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಆ.23ರನ್ನು ರಾಷ್ಟಿಥಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಗ್ರಹ ಮತ್ತು ರಾಕೆಟ್‌ಗಳ ತಯಾರಿಕೆ, ಅವುಗಳ ಕಾರ್ಯಕ್ಷಮತೆ, ವಿವಿಧ ಹಂತಗಳಲ್ಲಿ ಬೆಳೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು ಮತ್ತು ಉಪಗ್ರಹ, ರಾಕೆಟ್‌ಗಳ ಉಡಾವಣೆಯ ಬಗೆಯನ್ನು ಎಳೆ-ಎಳೆಯಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net