ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಳ್ಳಲಿ

Jeeja Maata School - Copy
Published on

ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಸಲಹೆ ಮಾಡಿದರು.
ನಗರದ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್. ಪ್ರಶಿಕ್ಷಣಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಗುರಿ ಸ್ವಂತದ್ದಾಗಿರಬೇಕು. ಯಾರದ್ದೋ ಒತ್ತಡಕ್ಕೆ ಒಳಗಾಗಿ ಗುರಿ ನಿರ್ಧರಿಸಬಾರದು. ಸುಲಭ ಸಾಧನೆಗಾಗಿ ಆಸಕ್ತಿ ಇರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಜ್ಞಾನಿಗಳನ್ನು ಸಮಾಜ ಸದಾ ಗೌರವಿಸುತ್ತದೆ. ಕಾರಣ, ವಿದ್ಯಾರ್ಥಿಗಳು ಎಲ್ಲ ವಿಷಯಗಳ ಜ್ಞಾನ ಪಡೆದುಕೊಳ್ಳಬೇಕು. ಜ್ಞಾನದ ಮಟ್ಟ ಎತ್ತರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಪವಿತ್ರ ಹಾಗೂ ಶ್ರೇಷ್ಠವಾಗಿದೆ. ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆದರ್ಶ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಉಪನ್ಯಾಸಕ ರಾಜಕುಮಾರ ಸಿಂಧೆ, ಪ್ರಶಿಕ್ಷಣಾರ್ಥಿ ಶರಣಮ್ಮ, ಶಾಲೆಯ ವಿದ್ಯಾರ್ಥಿನಿಯರಾದ ಸುರೇಖಾ, ಪ್ರಿಯಾಂಕಾ, ಸಂಜನಾ, ಶಾಂಭವಿ ಮಾತನಾಡಿದರು.
ಮುಖ್ಯಶಿಕ್ಷಕ ರಮೇಶ ಬಿರಾದಾರ, ಸಹ ಶಿಕ್ಷಕರಾದ ಸಂಜಯ್ ಪಾಟೀಲ, ಅನಿಲಕುಮಾರ ಟೆಕೋಳೆ, ರಾಜಕುಮಾರ ಗಾದಗೆ, ನಾಗರತ್ನ ಜಮಾದಾರ್, ಆನಂದ ಕಾಶೀನಾಥ, ವೈಷ್ಣವಿ ಬುಕ್ಕಾ, ಸ್ನೇಹಾ ಕಲ್ಯಾಣರಾವ್, ಸರಿತಾ ತಿಪ್ಪಣ್ಣ, ಶರಣಮ್ಮ ವೀರಶೆಟ್ಟಿ, ಸೌಂದರ್ಯ, ಸುವರ್ಣಾ ತುಕಾರಾಮ ಇದ್ದರು.
ಶಾಂತಕುಮಾರ ನಿರೂಪಿಸಿದರು. ಮಮತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net