ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು:ರೊ. ಕೆ. ಪಾಲಾಕ್ಷ ಕಿವಿಮಾತು

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು:ರೊ. ಕೆ. ಪಾಲಾಕ್ಷ ಕಿವಿಮಾತು
Published on

ಹಾಸನ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಸಾಮಾಜಿಕ ಚಿಂತನೆ ಮತ್ತು ನಾಯಕತ್ವದ ಗುಣಗಳ ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಡಿಸ್ಟ್ರಿಕ್ಟ್ ಗೌರ್ನರ್ ರೊ. ಕೆ. ಪಾಲಾಕ್ಷ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ವಿಜಯ ಶಾಲೆಯಲ್ಲಿ ಈಚೆಗೆ ನಡೆದ ರೋಟರಿ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಚಿಂತನೆ ಮತ್ತು ನಾಯಕತ್ವದ ಗುಣಗಳ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಾಯಕರಾಗಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಸಹಾಯ ಮಾಡುತ್ತವೆ. ಇಂದು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಮನೋಭಾವ ಹಾಗೂ ನಾಯಕತ್ವದ ಗುಣ ಅತ್ಯಗತ್ಯ. ನಾವು ಸಂಪಾದಿಸಿದ್ದರಲ್ಲಿ ಅಲ್ಪವನ್ನಾದರೂ ಅಗತ್ಯವಿರುವವರಿಗೆ ಹಂಚಬೇಕೆಂದು ತಿಳಿಸಿದರು.
ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡಿ, ಶಾಲೆಯ ಹಾಗೂ ರೋಟರಿಯ ವಿಚಾರಧಾರೆಗಳು ಒಂದೇ ಆಗಿದ್ದು, ಮಕ್ಕಳಲ್ಲಿ ಸಮಾಜಮುಖಿ ಆಲೋಚನೆಗಳು ತುಂಬಾ ಅತ್ಯಗತ್ಯವಾಗಿದೆ. ಇಲ್ಲಿ ಬಿಡುಗಡೆ ಮಾಡಲಾದ ಪೋಸ್ಟರ್ ವಿಜಯ ಶಾಲೆಯ ಧ್ಯೇಯೊದ್ದೇಶ, ರೋಟರಿಯ ಏಳು ಉದ್ದೇಶಗಳು ಹಾಗೂ ಸುಸ್ಥಿರ ಅಭಿವೃದ್ದಿ ಗುರಿಗಳ(ಎಸ್‌ಡಿಜಿ) ಸಂಯೋಜನೆಯನ್ನು ಸೂಚಿಸುತ್ತದೆ ಎಂದರು.
ಇದೆ ವೇಳೆ ವಿಜಯ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ವೈ.ಎಚ್. ಬಿಂಬಿತಾ, ಹಾಗೂ ಕಾರ್ಯದರ್ಶಿಯಾಗಿ ತ್ರಿಭುವನ್ ಎಸ್ ಗೌಡ ಅವರ ಪದಗ್ರಹಣ ನಡೆಯಿತು. ನೂತನವಾಗಿ ಆಯ್ಕೆಯಾದವರು, ಈ ಸಾಲಿನ ಯೋಜನೆಗಳ ವಿವರಗಳನ್ನು ತಿಳಿಸುತ್ತಾ ಸಮುದಾಯದ ಸೇವೆಗಾಗಿ ತಂಡದಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಸುಬ್ಬಸ್ವಾಮಿ, ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ರೊ. ಬಿ. ವಿಕ್ರಂ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ ಅಧ್ಯಕ್ಷ ರೊ.ಡಾ. ತೇಜಸ್ವಿ, ರೋಟರಿ ಇಂಟರಾಕ್ಟ್ ಕ್ಲಬ್ ಚೇರ್ಮನ್ ರೊ. ವಿಶ್ವನಾಥ್, ಕಾರ್ಯದರ್ಶಿ ರೊ.ಕೆ.ಎನ್. ವೆಂಕಟೇಶ್, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಡಾ. ಎಸ್.ಶ್ರೀಲಕ್ಷ್ಮೀ, ಪ್ರಾಂಶುಪಾಲ ಕೆ.ಎಸ್. ನಂದೀಶ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್ನಿನ ಸದಸ್ಯರು, ಶಿಕ್ಷಕರು, ಪೋಷಕರೂ ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net