

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಸ್ಥೃ ಎಂದರೆ ಸ್ವಸ್ಥತೆ, ಆರೋಗ್ಯ, ಕ್ಷೇಮ, ಕಲ್ಯಾಣ, ಸುಸ್ಥಿತಿ ಎಂಬ ಒಳ್ಳೆ ವಿಚಾರ ಒಳಗೊಂಡ ವಿಷಯ. ನಾವು ನಮ್ಮ ಸ್ವಾಸ್ಥೃ ಕಾಪಾಡಿಕೊಳ್ಳಲು ಉತ್ತಮ ಆರೋಗ್ಯ, ಜೀವನದಲ್ಲಿ ಶಿಸ್ತು ಹಾಗೂ ಚಾರಿತ್ರೃವಂತಹ ಶಿಕ್ಷಣ ಹೊಂದಿರಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್‌ನ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಸಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವಿದ್ಯಾರ್ಥಿ ಸ್ವಾಸ್ಥೃ ಜೀವನ ಹೊಂದಲು ಆತನ ದಿನಚರಿ ವ್ಯಾಯಾಮದಿಂದ ಆರಂಭವಾಗಬೇಕು. ಸಧೃಡ ದೇಹ ಮತ್ತು ಮನಸ್ಸು ವಿದ್ಯಾರ್ಥಿಗೆ ನಿರ್ದಿಷ್ಟ ಗುರಿ ಹೊಂದಲು ಸಹಕಾರಿ. ಇಂದಿನ ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ಬಿದ್ದು, ಮುಪ್ಪು ಆವರಿಸುವ ಮುಂಚೆಯೇ ತಮ್ಮ ಜೀವನ ಅಂತ್ಯವಾಗಿಸಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ದೂರವಿದ್ದು, ಒಳ್ಳೆ ಆಹಾರ, ಆಚಾರ, ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮನ, ಮನೆ ಹಾಗೂ ಸಮಾಜದ ಯೋಗಕ್ಷೇಮ ಕಾಪಾಡಿಕೊಂಡು ಗುರಿ ಮುಟ್ಟಲು ಸಾಧ್ಯ ಎಂದರು.
ಜೆಎಸ್‌ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಇಂದು ಎಷ್ಟೋ ಮನೆತನಗಳು ದುಶ್ಚಟದಿಂದ ಹಾಳಾಗಿ ಹೋಗುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಕುಟುಂಬಗಳನ್ನು ಹುಡುಕಿ ದುಶ್ಟಟ ಬಿಡಿಸಿ ಸರಿದಾರಿಗೆ ತರುವ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಸ್ವಾಸ್ಥೃ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಜೆಎಸ್‌ಎಸ್ ಸಂಸ್ಥೆ ನೈತಿಕ ಹಾಗೂ ಚಾರಿತ್ರಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುತ್ತಿದೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು.
ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಉದ್ದೇಶವು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿ ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರುವುದು. ವೀರೇಂದ್ರ ಹೆಗ್ಗಡೆ ಆಶಯದಂತೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಈ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಆಯೋಜಿಸಿ ಸ್ವಾಸ್ಥೃ ಸಮಾಜ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದರು.
ಯೋಜನಾಧಿಕಾರಿ ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ನಿರೂಪಿಸಿದರು.