

ಬೆಟ್ಟದಪುರ: ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸಿಮೀತವಾಗದೆ ಕಲಿತ ವಿದ್ಯೆಯಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸ್ಯಾಂಡಲ್ ವುಡ್ ನಟ ರಿಷಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಬರಬೇಕು ಎಂಬುದನ್ನು ಬಿಟ್ಟು, ಹೆಚ್ಚು ಬುದ್ಧಿ, ಸಮಾಜದ ಜ್ಞಾನ, ಸಾಮರ್ಥ್ಯ ತಲೆಯಲ್ಲಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಓದಿ. ಅನಿಕೇತನ ಕಾಲೇಜು ಉತ್ತಮ ಪರಿಸರದಲ್ಲಿ ನಿರ್ಮಾಣವಾಗಿದ್ದು, ಈ ದಿನಗಳನ್ನು ನೋಡುತ್ತಿದ್ದರೆ, ನಮ್ಮ ಕಾಲೇಜಿನ ಹಳೆಯ ದಿನಗಳು ನೆನಪಿಗೆ ಬರುತ್ತಿದೆ ಎಂದು ಮೆಲುಕು ಹಾಕಿದರು.
ನಾನು ಇಂಜಿನಿಯರ್ ಪದವಿ ಮುಗಿಸಿದರೂ, ಸಿನಿಮಾ ನಟನೆಯಲ್ಲಿ ಅತಿ ಹೆಚ್ಚು ಗೀಳು ಬೆಳೆಸಿಕೊಂಡಿದ್ದೆ. ಚಿತ್ರರಂಗದ ಯಾವುದೇ ಬೆನ್ನೆಲುಬು ಇಲ್ಲದಿದ್ದರೂ ಇಂದು ಸಮೃದ್ಧ ರಾಜ್ಯದ ಜನತೆಯೂ ಒಂದು ಹಂತಕ್ಕೆ ನನ್ನನ್ನು ಕರೆದುಕೊಂಡು ಬೆಳೆಸಿ ಆಶೀರ್ವಾದ ಮಾಡುತ್ತಿದ್ದಾರೆ. ಅಲ್ಲದೆ, ಯಾವುದೇ ಕ್ಷೇತ್ರದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಕೈ ಬೆರಳಚ್ಚಿನ ಗುರುತಿನ ಹಾಗೆ, ಪ್ರತಿಯೊಬ್ಬರಲ್ಲಿಯೂ ಒಂದೊಂದು ತಮ್ಮದೇ ಪ್ರತಿಭೆ ಇರುತ್ತದೆ. ಅದನ್ನು ಸರಿಯಾದ ಮಾರ್ಗದಲ್ಲಿ ಸದುಪಯೋಗ ಮಾಡಿಕೊಳ್ಳಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಜೆ. ಸೋಮಣ್ಣ ಮಾತನಾಡಿ, ಕಾಲದ ಮುಂದೆ ಯಾವುದೂ ಕೂಡ ಶಾಶ್ವತವಾಗಿ ಇರುವುದಿಲ್ಲ. ಹಾಗಾಗಿ, ನಮ್ಮ ಸಂಸ್ಥೆಯೂ ಮೊದಲಿಗಿಂತ ಹಂತ ಹಂತವಾಗಿ ಬೆಳೆದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಾತಾವರಣ ನಿರ್ಮಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜತೆಗೆ ಅವರಲ್ಲಿ ಇರುವ ಪ್ರತಿಭೆ ಅನಾವರಣ ಮಾಡುವುದಕ್ಕೆ ಸಂಸ್ಥೆ ಸಾಕಷ್ಟು ದುಡಿಯುತ್ತಿದೆ. ಒಬ್ಬ ವ್ಯಕ್ತಿಯನ್ನು ನಾಗರಿಕನಾಗಿ ಮಾಡುವುದು ವಿದ್ಯೆ ಮಾತ್ರ. ವಿದ್ಯಾರ್ಥಿಗಳು ಕೂಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ಪಾಲಕರಿಗೆ ಹಾಗೂ ಕಾಲೇಜಿಗೆ ವಿಶೇಷ ಗೌರವ ಸಲ್ಲಿಸಬೇಕು ಎಂದರು.
ಪ್ರಾಂಶುಪಾಲ ಬಸವರಾಜು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಚಿತ್ರಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಲವು ಗಣ್ಯರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಿರುತರೆ ನಟ ದೇವನ್, ಸಂಸ್ಥೆಯ ಅಧ್ಯಕ್ಷ ಅಪ್ಪಣ್ಣ, ಗೌರವ ಸಲಹೆಯ ಮಂಡಳಿತ ಸದಸ್ಯರಾದ ಆರ್.ಎಸ್.ದೊಡ್ಡಣ್ಣ, ಜಿ.ಟಿ ನಾಗರಾಜು, ಸಣ್ಣಸ್ವಾಮಿಗೌಡ, ಕೋಣಸೂರು ಮೂರ್ತಿ, ಎಂ.ಆರ್.ಪಿ. ಪ್ರೌಢಶಾಲೆಯ ಮುಖ್ಯಶಿಕ್ಷಕ ದೇವರಾಜು, ಶಿಕ್ಷಕರಾದ ದೇವರಾಜು, ಮಹೇಶ್, ಪ್ರಾಂಶುಪಾಲ ಬಸವರಾಜು, ಟಿ.ಆರ್ ಶಕುಂತಲಾ, ಟಿ.ಆರ್ ಪ್ರಶಾಂತ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.