ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಿ

9blrp1
ಬೇಲೂರು ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯರು.
Published on

ಬೇಲೂರು: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಜೀವನದಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆಯದೆ ದೇಶದ ಉತ್ತಮ ಪ್ರಜೆಯಾಗಿ ಕಾನೂನು ಗೌರವಿಸಿ ಮುನ್ನಡೆಯಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಶಶಿಕಲಾ ಹೇಳಿದರು.

ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಅಪರಿಮಿತ ಕಾನೂನು ಅರಿವು ಮತ್ತು ನಾಗರಿಕರ ಸಬಲೀಕರಣ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಾನೂನು ಉಲ್ಲಂಘಿಸುವ ಹಲವಾರು ಘಟನೆಗಳು ನಡೆಯುತ್ತಲೇ ಇದೆ. ಮೋಟಾರು ವಾಹನ ಕಾಯ್ದೆಯಡಿ ಸಾಕಷ್ಟು ಪ್ರಕರಣಗಳು ದಾಖಲಿಸಬಹುದಾಗಿದೆ. ವಿದ್ಯಾರ್ಥಿಗಳು 18 ವರ್ಷ ತುಂಬಿದ ನಂತರ ಡ್ರೈವಿಂಗ್ ಲೈಸನ್ಸ್ ಪಡೆದು ವಾಹನ ಚಲಾಯಿಸಬೇಕೆ ವಿನಃ ಸುಮ್ಮನೇ ಕಾನೂನು ಮೀರಿ ನಡೆಯುವಂತಿಲ್ಲ ಎಂದರು.

ಹೆಣ್ಣು ಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕಾನೂನಿನ ಉಲ್ಲಂಘನೆಯಂತಹ ಘಟನೆಗಳಲ್ಲಿ ಭಾಗಿಯಾಗದೆ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದರು.

ವಕೀಲ ಪುಟ್ಟಸ್ವಾಮಿಗೌಡ ಮಾತನಾಡಿ, ಗರ್ಭಾವಸ್ಥೆಯಿಂದಲೇ ಹೆಣ್ಣು ಮಗುವಿನ ಸಂರಕ್ಷಣೆಗಾಗಿ ಹಲವಾರು ಕಾಯ್ದೆಗಳನ್ನು ರೂಪಿಸಲಾಗಿದೆ, ಭ್ರೂಣಪತ್ತೆ ನಿಷೇಧ ಕಾಯ್ದೆ, ಶಿಕ್ಷಣ ಹಕ್ಕು, ವರದಕ್ಷಿಣೆ ನಿಷೇಧ, ಕೌಟುಂಬಿಕ ಹಿಂಸೆ ತಡೆ ಕಾಯ್ದೆ, ಜೀವನಾಂಶ ಪರಿಹಾರ ಹಕ್ಕು ಇತ್ಯಾದಿ ಕಾನೂನುಗಳು ಹೆಣ್ಣಿನ ಜೀವಮಾನದ ವಿವಿಧ ಕಾಲ ಘಟ್ಟದಲ್ಲಿ ದೌರ್ಜನ್ಯ ಮತ್ತು ಹಿಂಸೆಯಿಂದ ರಕ್ಷಣೆ ನೀಡಲು ರಚನೆಯಾಗಿದೆ. ಎಲ್ಲರೂ ಇದರ ಬಗ್ಗೆ ಮಾಹಿತಿ ಪಡೆಯಬೇಕು. ಲಿಂಗ ಸಮಾನತೆಯ ಕಡೆಗೆ ಸಾಗುತ್ತಿರುವ ಭಾರತದ ಮಹಿಳೆಯರು ತಮ್ಮ ಮೇಲಾಗುತ್ತಿರುವ ಶೋಷಣೆಯನ್ನು ಧೈರ್ಯವಾಗಿ ಎದುರಿಸಬೇಕು ಮತ್ತು ಕಾನೂನು ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದರು.

ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾಮಣಿ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುಟ್ಟರಾಜು, ಉಪನ್ಯಾಸಕರಾದ ವೀರಭದ್ರಪ್ಪ, ಜ್ಯೋತಿ, ರತ್ನಾವತಿ, ಸಿದ್ದಲಿಂಗಪ್ಪ, ಅಧೀಕ್ಷಕ ಕೇಶವ ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net