

ಆಲೂರು: ಪ್ರತಿಯೊಬ್ಬರೂ ಪ್ರತಿದಿನ ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ದೈನಂದಿನ ವಿದ್ಯಮಾನ ತಿಳಿಯುವುದಲ್ಲದೆ ಓದುವ ಅಭ್ಯಾಸ ರೂಢಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್ ತಿಳಿಸಿದರು.
ಪಟ್ಟಣದಲ್ಲಿರುವ ಶಾಖಾ ಗ್ರಂಥಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯುನ್ಮಾನಗಳಲ್ಲಿ ಪ್ರಸಾರವಾಗುವ ಮೋಜಿನ ಕಾರ್ಯಕ್ರಮಗಳತ್ತ ಎಲ್ಲರ ಒಲವು ಹೆಚ್ಚಿದೆ. ಟಿವಿ ಮುಂದೆ ಕುಳಿತರೆ ಜ್ಞಾನ ವೃದ್ಧಿಸುವುದಿಲ್ಲ ಎಂದರು.
ಕನ್ನಡ ಪ್ರಾಧ್ಯಾಪಕ ಡಿ.ಕೆ.ಮಂಜಯ್ಯ ಮಾತನಾಡಿ, ನಮ್ಮ ಜೀವನಶೈಲಿ ರೂಪಿಸುವಲ್ಲಿ ಗ್ರಂಥಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ತಲೆ ತಗ್ಗಿಸಿ ಪುಸ್ತಕ ಓದಿದರೆ, ಅದು ನಮ್ಮನ್ನು ಜೀವನ ಪೂರ್ತಿ ತಲೆತಗ್ಗಿಸದಂತೆ ನೋಡಿಕೊಳ್ಳುತ್ತದೆ. ಪುಸ್ತಕದ ಮೇಲಿನ ಪ್ರೀತಿ ನಮ್ಮನ್ನು ಸದೃಢರನ್ನಾಗಿಸುತ್ತದೆ ಎಂದರು.
ಜ್ಞಾನದ ಬೆಳವಣಿಗೆಯಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ದಿನ ಪತ್ರಿಕೆಗಳನ್ನೂ ಓದುತ್ತಿಲ್ಲ. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಬಳಸುವವರು ವಿರಳವಾಗಿದ್ದಾರೆ. ವಿದ್ಯಾರ್ಥಿಗಳು ಓದಿನ ಜತೆಗೆ ಸಂಪ್ರದಾಯ, ಸಂಸ್ಕೃತಿಗಳನ್ನು ಅರಿಯಬೇಕು. ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್, ಗ್ರಂಥಾಲಯ ಸಹಾಯಕ ಟಿ.ಕೆ.ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಗುಲಾಮ್ ಸತ್ತಾರ್, ರಾಧಮ್ಮ ಜನಸ್ಪಂದನ ಸಂಸ್ಥೆ ಸಂಸ್ಥಾಪಕ ಹೇಮಂತ್ ಕುಮಾರ್,ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕಾಂತ್, ಫಾದರ್ ಬಸವರಾಜ್, ಶಿಕ್ಷಕರಾದ ವೆಂಕಟರಂಗಯ್ಯ, ದ್ಯಾವಪ್ಪ, ತಿಮ್ಮಯ್ಯ , ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಟರಾಜ್ ನಾಕಲಗೋಡು ಇದ್ದರು.