ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲಿ

Let the students rise to the top
ಇಂಡಿ ಪಟ್ಟಣದ ಆರ್.ಎಂ. ಶಹಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸ್ಥೆಯ ದಶಮಾನೋತ್ಸವ ಹಾಗೂ ವಿಜ್ಞಾನಿ ಸಂಜೀವ ಗೌರ ಅವರ ಸನ್ಮಾನ ಸಮಾರಂಭವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.
Published on

ಇಂಡಿ: ಭಾರತದ ಇಸ್ರೋ ಮಾಡಿರುವ ಸಾಧನೆಯನ್ನು ಜಗತ್ತೇ ಮೆಚ್ಚಿ ಕೊಂಡಾಡುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಆರ್.ಎಂ. ಶಹಾ ಸಂಸ್ಥೆಯ ಪಬ್ಲಿಕ್ ಶಾಲೆಯ ದಶಮಾನೋತ್ಸವ ಮತ್ತು ಇಸ್ರೋ ವಿಜ್ಞಾನಿ ಸಂಜೀವ ಗೌರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನ ದೇಶಪಾಂಡೆ ತಾಂಡಾ ಮತ್ತು ತಾಂಬಾ ಗ್ರಾಮದ ಇಬ್ಬರು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಸೇವೆಯಲ್ಲಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯ. 70ವರ್ಷಗಳ ಹಿಂದೆ ತಾಲೂಕಿನ ಬಂಥನಾಳ ಗ್ರಾಮದ ಸಂಗನಬಸವ ಶ್ರೀಗಳು ತಮ್ಮ ಜೋಳಿಗೆಯ ಮೂಲಕ ಶ್ರಮಿಸಿ ಕಟ್ಟಿದ ಶಿಕ್ಷಣ ಸಂಸ್ಥೆಗಳ ಪ್ರಭಾವದಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು.

ಇಂದು ತಾಲೂಕಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಮಾಡಿಕೊಂಡು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಅವೆಲ್ಲವುಗಳಲ್ಲಿ ಸಾಕಷ್ಟು ಸ್ಥಾನಮಾನಗಳಿವೆ. ಆದರೆ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಬರಬೇಡಿ ಎಂದು ಸಲಹೆ ನೀಡಿದರು.

ಇಸ್ರೋ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ ಶಹಾ ಶಾಲೆಯಲ್ಲಿ ಹೊಸದಾಗಿ ಅಳವಡಿಸಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಇಸ್ರೋ ಸಾಧನೆ ಮಾಡಿರುವ ಕಾರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

1969ರಲ್ಲಿ ಸ್ಥಾಪನೆಯಾಗಿರುವ ಇಸ್ರೋ 1975ರಲ್ಲಿ ಮೊದಲ ಬಾರಿಗೆ ಆರ್ಯಭಟ ಹಾರಿಸಿತ್ತು. ಇಂದು ದೇಶದ 13 ಸ್ಥಳಗಳಲ್ಲಿ ಇಸ್ರೋ ಶಾಖೆಗಳನ್ನು ತೆರೆದು ವಿಶ್ವವೇ ಬೆರಗುಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.

ಆರ್.ಎಂ. ಶಹಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಅಧ್ಯಕ್ಷತೆ ವಹಿಸಿದ್ದರು. ಆಶಾ ಗೌರ, ವಕೀಲ ಸುನೀಲ ಕುಲಕರ್ಣಿ ಇತರರಿದ್ದರು. ಪ್ರಾಚಾರ್ಯ ಪರವೀನ ಜಮಾದಾರ ಸ್ವಾಗತಿಸಿದರು. ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net