ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

Sanmana
Published on

ಚಿತ್ರದುರ್ಗ: ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೊತ್ತು ಕೊಟ್ಟು, ಸರಿಯಾದ ಮಾರ್ಗದರ್ಶನ ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಿದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.

ಕಡ್ಲೆಗುದ್ದು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಕೆಂಚಮ್ಮ, ವೀರಬಸಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

ಯಾರೂ ಕದಿಯಲಾಗದ ಸಂಪತ್ತು ವಿದ್ಯೆಯಾಗಿದೆ. ದೇಶವನ್ನು ಬಲಿಷ್ಠಗೊಳಿಸುವ ಶಕ್ತಿ ಶಿಕ್ಷಣಕ್ಕಿದೆ. ಅಲ್ಲದೆ, ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಆದ್ದರಿಂದ ತಪ್ಪದೇ ಶಾಲೆಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಯಟ್ ಜಿಲ್ಲಾ ಉಪನ್ಯಾಸಕ ಆರ್.ನಾಗರಾಜ್ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ ಎರಡೂ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇಲ್ಲಿ ಹೆಚ್ಚಿನ ಅಂಕ ಗಳಿಸಿದರೆ, ಮುಂದೆ ಟೆಕ್ನಿಕಲ್ ಕೋರ್ಸ್ ಸೇರಿ ಉನ್ನತ ಶಿಕ್ಷಣ ಸಂಬಂಧ ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ 43 ಬಾರಿ ರಕ್ತದಾನ ಮಾಡಿರುವ ಈ.ಅರುಣ್ ಕುಮಾರ್, ರೋಟರಿ ಸೇವಾ ಭವನಕ್ಕೆ 20 ಲಕ್ಷ ರೂ. ನೆರವು ನೀಡಿರುವ ಎಸ್.ವೀರೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಮಾಸ್ಕ್, ಪ್ರಥಮ ಚಿಕಿತ್ಸಾ ಕಿಟ್ ವಿತರಿಸಲಾಯಿತು.

ಸಂಸ್ಥೆಯ ರಾಜ್ಯ ಮಂಡಳಿ ಸದಸ್ಯ ಅನಂತರೆಡ್ಡಿ, ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ಮುಖ್ಯ ಶಿಕ್ಷಕ ಡಾ.ಕೆ.ಎನ್.ಮಹೇಶ್, ಎಸ್.ವಿ.ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net