

ಹಾಸನ: ವಿದ್ಯಾರ್ಥಿಗಳು ಮತದಾನದ ಮಹತ್ವ ಅರಿತು ಸಾರ್ವತ್ರಿಕ ಚುನಾವಣೆಯಲ್ಲಿ ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಒಇ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್. ಪೂರ್ಣಿಮಾ ಅವರು ಹೇಳಿದರು.
ಮೊಸಳೆ ಹೊಸಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಮಿಡ್‌ಟೌನ್ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯ ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ನೈತಿಕತೆಯ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸರ್ಕಾರ ರಚಿಸಿ. ಹಾಗೆಯೇ 18 ವರ್ಷ ತುಂಬಿದವರು ಮತದಾನ ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಅತೀ ದೊಡ್ಡ ಶಕ್ತಿ ಅಥವಾ ಅಸ್ತ್ರ. ಯಾವುದೇ ಸರ್ಕಾರಿ ಕಚೇರಿಯಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಕೇಳಿ ಪಡೆಯಬಹುದು. ಆದರೆ, ಈ ಕಾಯ್ದೆಯ ಬಗ್ಗೆ ಮೊದಲು ತಿಳಿವಳಿಕೆ ಹೊಂದುವುದು ಮುಖ್ಯ. ಯಾವ ಮಾಹಿತಿಯನ್ನು ಕೇಳಬೇಕು, ಯಾವುದನ್ನು ಕೇಳಬಾರದು ಎಂಬ ಅರಿವು ಎಲ್ಲರಿಗೂ ಇರಬೇಕು ಎಂದು ಆರ್‌ಟಿಐ ಬಗ್ಗೆ ಕೂಲಂಕಷವಾಗಿ ತಿಳಿಸಿದರು.
ನಮಗೆ ಯಾವುದಾದರೂ ಮಾಹಿತಿ ಬೇಕು ಎಂದರೆ ನೇರವಾಗಿ ಅಧಿಕಾರಿಗೆ ಕರೆ ಮಾಡಿಯೋ ಅಥವಾ ಮೌಖಿಕವಾಗಿಯೂ ಕೇಳಲು ಬರುವುದಿಲ್ಲ. ಅದಕ್ಕೆ ಕಾಲಂ 6ರ ಪ್ರಕಾರ ಸರ್ಕಾರಿ ಮಾಹಿತಿಯನ್ನು ಅಥವಾ ದಾಖಲೆಯನ್ನು ಲಿಖಿತವಾಗಿ ಅರ್ಜಿ ಮೂಲಕವೇ ಕೇಳಬೇಕು. ನೀವು ಮಾಹಿತಿ ಕೇಳುವಾಗ ನಿಖರ ಕಾರಣ ತಿಳಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಈ ಕಾಯ್ದೆಯಲ್ಲಿ ಸೆಕ್ಷನ್ 8 ತುಂಬಾ ಮುಖ್ಯವಾದದ್ದು. ಇದು ನಮಗೆ ಯಾವ ಮಾಹಿತಿಯನ್ನು ಕೇಳಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ನಮ್ಮ ದೇಶದ ಸಾರ್ವಭೌಮತ್ವ ದಕ್ಕೆ ಉಂಟು ಮಾಡುವ ಮಾಹಿತಿ ಕೇಳುವಂತಿಲ್ಲ. ಯಾವ ಮಾಹಿತಿ ಕೇಳಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆಯೋ ಅಂತಹ ಮಾಹಿತಿ ಕೇಳುವಂತಿಲ್ಲ. ಸಂಸತ್ತಿನ ವ್ಯವಹಾರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕೇಳುವಂತಿಲ್ಲ. ವ್ಯಾಪಾರದ ಗೌಪ್ಯತೆ, ಆಂತರಿಕ ಗೌಪ್ಯತೆ, ಕಕ್ಷಿದಾರ ಮತ್ತು ವಕೀಲರ ನಡುವಿನ ಚರ್ಚೆಯ ಮಾಹಿತಿ, ರೋಗಿ ಹಾಗೂ ವೈದ್ಯರ ನಡುವಿನ ಚಿಕಿತ್ಸೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಹಾಗೆಯೇ ವಿದೇಶ ವ್ಯವಹಾರಗಳ ಮಾಹಿತಿ, ತನಿಖೆಯ ಮಾಹಿತಿ. ಸಾರ್ವಜನಿಕ ಹಿತಾಸಕ್ತಿಗೆ ದಕ್ಕೆ ಉಂಟಾಗುವಂತಹ ಮಾಹಿತಿ ಆರ್‌ಟಿಐ ಅಡಿ ಕೇಳುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಪ್ರಮಾಣವಚನ ಬೋಧಿಸಲಾಯಿತು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರೇಗೌಡ, ಹಾಸನ ರೋಟರಿ ಕ್ಲಬ್ ಆಫ್ ಮಿಡ್‌ಟೌನ್ ಅಧ್ಯಕ್ಷೆ ಮಮತಾ ಪಾಟೀಲ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.