

ಆಲೂರು: ಕಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಈ ಮೂಲಕ ಉನ್ನತ ಮಟ್ಟಕ್ಕೆ ಏರಬೇಕು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪೂರಕವಾಗಿರುವುದರಿಂದ ವಿದ್ಯಾರ್ಥಿಗಳು ಕಲೆಯೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿರಬೇಕು. ತಂತ್ರಜ್ಞಾನದ ಒಳ್ಳೆಯ ಅಂಶಗಳನ್ನು ಮಾತ್ರ ಬಳಸಿಕೊಂಡು ಆ ಮೂಲಕ ಉದ್ಯೋಗದ ವಿವಿಧ ರಂಗಗಳ ಕುರಿತ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಆರ್.ಕಾಂತಮ್ಮ, ಉಪಪ್ರಾಂಶುಪಾಲ ವಿಜಯ್‌ಕುಮಾರ್, ಉಪನ್ಯಾಸಕರಾದ ಕೆ.ರೋಹಿತ್, ತ್ರಿವೇಣಿ, ಬಿ.ಬಿ.ಗಿರೀಶ್, ಬಿ.ಎನ್.ಇರ್ಫಾನ್ ಪಾಷಾ, ಜೆ.ವರ್ಷಿತಾ, ಎಂ.ಕೆ.ಕೃಷ್ಣಯ್ಯ, ಸುನಿಲ್‌ಕುಮಾರ್, ಮಲ್ಲಿಕಾರ್ಜುನ, ಸುರೇಶ್, ಗೋವಿಂದಯ್ಯ, ಅನುಷಾ, ನಿವೃತ್ತ ಉಪನ್ಯಾಸಕ ನಿಂಗರಾಜು ಇತರರಿದ್ದರು.