ವಿದ್ಯಾರ್ಥಿಗಳು ಅಂಬೇಡ್ಕರ್ ಆಶಯದಲ್ಲಿ ಸಾಗಿ

27rajesh6
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಹೆಚ್ಚು ಮಹತ್ವವನ್ನು ಪಡೆದುಕೊಂಡಿದ್ದು, ಉನ್ನತ ಪದವಿಗಳನ್ನು ಪಡೆದುಕೊಳ್ಳುವ ತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ತಯಾರಿಯಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಸಂವಿಧಾನ ರಚನೆ ಮಾಡುವ ಮೂಲಕ ಎಲ್ಲರಿಗೂ ಶಿಕ್ಷಣದ ಹಕ್ಕು ನೀಡಿದ್ದರು. ಮೀಸಲಾತಿಯನ್ನು ಕಲ್ಪಿಸಿಕೊಟ್ಟರು. ಈಗಾಗಲೇ ನಮ್ಮ ಸರ್ಕಾರ ವೈದ್ಯಕೀಯ ಶಾಲೆಗಳಲ್ಲಿ ಸೀಟು ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿ ಮಾಡಲು ನಿರ್ಣಯ ಮಾಡಿದೆ. ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡಿದೆ. ವಿದ್ಯಾರ್ಥಿ ವೇತನ ಹೆಚ್ಚಳ, ಹಾಸ್ಟೆಲ್ ಸೌಲಭ್ಯಗಳ ಆಧುನಿಕರಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.

ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಪರಿಶಿಷ್ಟ ಜಾತಿ ನೌಕರರ ಸಂಘ ಇಂಥ ಮಕ್ಕಳನ್ನು ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಅವರ ಅತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಈಗ ಪಾಸಿಂಗ್ ಮಾರ್ಕ್ಸ್ ಅನ್ನು 35 ರಿಂದ 33ಕ್ಕೆ ಇಳಿಕೆ ಮಾಡಿದೆ. ಆದರು, ಸಹ ನಮ್ಮ ಜಾತಿಯ 180ಕ್ಕು ಹೆಚ್ಚು ಮಕ್ಕಳು 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದೀರಿ ಎಂದರೆ ಹೆಮ್ಮೆ ತಂದಿದೆ. ಶಿಕ್ಷಣ ಮೌಲ್ಯಗಳನ್ನು ಹೆಚ್ಚಿಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 90 ಕ್ಕಿಂತ ಹೆಚ್ಚು ಅಂಕ ಪಡೆದ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 40 ಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ, ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅರುಳ್‌ಕುಮಾರ್, ಎಸ್ಪಿ ಡಾ.ಬಿ.ಟಿ. ಕವಿತಾ, ಅಹಾರ ಇಲಾಖೆಯ ಉಪ ನಿರ್ದೇಶಕ ಯೋಗಾನಂದ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಬಿಂದ್ಯಾ, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಮಹೇಶ್, ನಗರಸಭೆ ಆಯುಕ್ತ ರಾಮದಾಸ್, ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ. ರೇಣುಕಾದೇವಿ, ತಹಶೀಲ್ದಾರ್ ಗಿರಿಜಾ, ಬಿಇಓ ಹನುಮಶೆಟ್ಟಿ, ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಲತಾಪುಟ್ಟಸ್ವಾಮಿ, ಮಹದೇವಸ್ವಾಮಿ, ಗಜೇಂದ್ರ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net