

ಚನ್ನರಾಯಪಟ್ಟಣ: ದೇಶದ ಭವಿಷ್ಯ ವಿದ್ಯಾರ್ಥಿಗಳು. ಅವರಿಗೆ ಸೂಕ್ತ ಮಾರ್ಗದರ್ಶನ, ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2022-23ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಹಾಗೂ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. 1,050 ವಿದ್ಯಾರ್ಥಿಗಳು, 4 ಕೋರ್ಸ್‌ಗಳು, ಅತ್ಯುತ್ತಮ ಕಟ್ಟಡ, ವಿಶಾಲವಾದ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಶೀಘ್ರದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳ ಪರಿಸರದ ಕುರಿತಾಗಿ ಕಾಳಜಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪ್ರಕೃತಿಯಿಂದ ಸಕಲವನ್ನು ಪಡೆಯುವ ನಾವುಗಳು, ಪ್ರಕೃತಿಗೆ ಹಿಂದಿರುಗಿ ಏನನ್ನೂ ಕೊಡಲಾಗುತ್ತಿಲ್ಲ. ಎಲ್ಲರೂ ಚಿಕ್ಕಂದಿನಿಂದಲೇ ಪರಿಸರವನ್ನು ಪ್ರೀತಿಸುವ ಗುಣ ರೂಢಿಸಿಕೊಳ್ಳಬೇಕು. ಮರಗಿಡಗಳನ್ನು ಬೆಳೆಸುವ ಸಂಕಲ್ಪ ತೊಡಬೇಕು. ಇದಾಗದಿದ್ದಲ್ಲಿ ಮುಂಬರುವ ದಿನಗಳು ಬಹಳ ಕಠಿಣವಾಗಿರಲಿವೆ ಎಂದರು.
ಸಮಾರಂಭದಲ್ಲಿ ಉಪನ್ಯಾಸಕ ಸಚೇಂದ್ರ ಬೆಕ್ಕ ಅವರು ರಚಿಸಿರುವ ‘ಐಚಾರಿತ್ರಿಕ ವೈಭವ‘ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಾಗಮಂಗಲದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಭೈರೇಗೌಡ, ಅಂತಾರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಆಟಗಾರ ಇನ್ಫೆಂಟ್ ನಿಶಾಂತ್ ಅವರನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲರಾದ ಬಿ.ಎಸ್.ಪೂರ್ಣಿಮಾ, ಹಿರಿಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಸವರಾಜ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮೆಡಿಕಲ್ ವೆಂಕಟೇಶ್, ಕೃಷ್ಣಪ್ಪ, ಓ.ಆರ್.ರಂಗೇಗೌಡ, ಗೌಡಗೆರೆ ವಿಎಸಿಸಿಎಸ್ ಅಧ್ಯಕ್ಷ ನಾಗೇಂದ್ರಬಾಬು, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಂ.ಎಲ್.ಇಂದ್ರೇಶ್, ದೈಹಿಕ ಶಿಕ್ಷಣ ನಿರ್ದೇಶಕ ಸಿ.ಪ್ರಕಾಶ್‌ಕುಮಾರ್, ರೋರ‌್ಸ್ೂ ಲೀರ‌್ಸ್ೂ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಡಾ.ಕೆ.ಎನ್.ಅಜಯ್‌ಕುಮಾರ್, ಎನ್‌ಎಸ್‌ಎಸ್ ಮುಖ್ಯಸ್ಥರಾದ ಕೆ.ಟಿ.ಶಿವಕುಮಾರ್, ಜೆ.ಎಸ್.ಗುರುರಾಜ್, ರೆಡ್‌ಕ್ರಾಸ್ ಘಟಕದ ಬಿ.ಜಿ.ನಾಗರಾಜ್ ಇದ್ದರು.