

ಕಲಬುರಗಿ: ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿ ಬದಲಾವಣೆಯಿಂದ ವಿಶ್ವವಿದ್ಯಾಲಯಗಳ ವೇಳಾಪಟ್ಟಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಬೇಕು ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಣಮಂತ ಬಗಲಿ ಆಗ್ರಹಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅತೀ ಹೆಚ್ಚು ನಗರ ಪ್ರದೇಶಗಳ ಶಾಲೆ, ಕಾಲೇಜುಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾದ ನಂತರ ಬಸ್ ಪಾಸ್ ವಿತರಿಸದಿರುವುದರಿಂದ ನಿತ್ಯ ನೂರಾರು ರೂ. ಖರ್ಚು ಮಾಡುವಂತ ಸ್ಥಿತಿ ಸೃಷ್ಟಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಯೋಜನೆ ಜಾರಿ ಮಾಡಿರುವ ಪರಿಣಾಮ ಅತಿ ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ, ಬಸ್‌ಗಳ ಸಂಖ್ಯೆ ಹೆಚ್ಚಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆ ಪ್ರಾರಂಭವಾದ ಮೂರು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ. ಜೂನ್‌ನಲ್ಲಿ ಶಾಲೆ ಕಾಲೇಜು ಆರಂಭವಾದರೂ ವಿದ್ಯಾರ್ಥಿಗಳಿಗೆ ವಸತಿ ಪ್ರವೇಶಾತಿ ಸಿಗುವುದರಲ್ಲಿ ಸೆಪ್ಟೆಂಬರ್‌ವರೆಗೂ ತಲುಪುವ ಹಂತ ಸರ್ಕಾರ ಮತ್ತು ಅಧಿಕಾರಿಗಳು ಮಾಡಿಟ್ಟಿದ್ದಾರೆ. ಕೂಡಲೇ ಪ್ರಸಕ್ತ ವರ್ಷದ ವಸತಿ ನಿಲಯ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಏಕರೂಪ ವೇಳಾಪಟ್ಟಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಏಕರೂಪ ವೇಳಾಪಟ್ಟಿ ಸಮರ್ಪಕವಾಗಿ ಜಾರಿ ಮಾಡಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಸಮಸ್ಯೆ ನೀಗಿಸಬೇಕು, ಬಸ್ ಪಾಸ್ ವಿಸ್ತರಣೆ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.