

ಚಿತ್ರದುರ್ಗ: ನಾವು ಎಂಥ ಶಿಕ್ಷಣ ಕೊಡುತ್ತಿದ್ದೇವೆ ಎಂಬುದರ ಮೇಲೆ ಆ ದೇಶದ ಭವಿಷ್ಯ ನಿಂತಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ 2025-26ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಒಂದು ರಾಷ್ಟ್ರದ ಭವಿಷ್ಯ ಅಲ್ಲಿಯ ಶಾಲಾ-ಕಾಲೇಜುಗಳ ಕೊಠಡಿಗಳಲ್ಲಿ ರೂಪಿತವಾಗುತ್ತದೆ. ವಿದ್ಯಾಲಯಗಳು ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸನ್ನಡತೆ ಮತ್ತು ಸಂಸ್ಕೃತಿ ಕಲಿಸಬೇಕಿದೆ ಎಂದು ಸಲಹೆ ನೀಡಿದರು.
ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗೌರವ ಮನೋಭಾವನೆ ಬಹಳ ಮುಖ್ಯ. ಸಾಧನೆ ಮಾಡಲು 18ರಿಂದ 30 ರವರೆಗಿನ ವಯಸ್ಸು ಅತ್ಯಂತ ಸೂಕ್ತ. ಆದ್ದರಿಂದ ಈ ಸಮಯ ವ್ಯರ್ಥವಾಗಿ ಕಳೆಯದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್‌ಶಿವಕುಮಾರ್, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ.ಬಿ.ಎಂ. ಸ್ವಾಮಿ, ಪ್ರೊ. ಮಂಜುನಾಥ ಸ್ವಾಮಿ, ಪ್ರೊ. ವೆಂಕಟೇಶ್, ಪ್ರೊ.ಬಿ. ನಾಗರಾಜ, ಡಾ. ಸತೀಶ್‌ನಾಯ್ಕ, ಡಾ.ಸಿ. ರಮೇಶ್, ಮೋಹನ್, ವಿನಯ್, ವೀರಣ್ಣ, ಹೀನಾ ಕೌಸರ್, ನಮನಾ, ಶಾಲಿನಿ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
ಪ್ರಾಚಾರ್ಯ ಡಾ.ಎಸ್.ಎಚ್. ಪಂಚಾಕ್ಷರಿ ಸ್ವಾಗತಿಸಿದರು. ಡಾ.ಎಸ್. ಆನಂದ್ ವಂದಿಸಿದರು. ಡಾ.ಬಿ. ರೇವಣ್ಣ ನಿರೂಪಿಸಿದರು.
*ಕೋಟ್*
ಮುರುಘಾಮಠ ಹಾಗೂ ಎಸ್‌ಜೆಎಂ ವಿದ್ಯಾಸಂಸ್ಥೆ ಹಲವು ದಶಕಗಳಿಂದ ಅನ್ನ, ಅಕ್ಷರ ದಾಸೋಹವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.
ಪಟೇಲ್ ಶಿವಕುಮಾರ್, ಅಧ್ಯಕ್ಷರು, ಚಿತ್ರದುರ್ಗ ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ
===