

ಮೂಡಿಗೆರೆ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಸಂಸ್ಕಾರವೆಂಬ ದೀಪ ಹಚ್ಚಿದಾಗ ಜಗತ್ತು ಪ್ರಕಾಶಮಾನವಾಗಿ ಬೆಳಗುತ್ತದೆ. ಅದರಂತೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದಾಗ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಜಾವಳಿ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ದೂರ ಉಳಿಯುವ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಶೈಕ್ಷಣಿಕವಾಗಿ ಶೇ.100 ಪ್ರಗತಿ ಸಾಧಿಸಬೇಕೆಂದು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಆಗಾಗ ಮಾರ್ಗದರ್ಶನ ನೀಡುತ್ತ ಬಂದಿದೆ. ಸರ್ಕಾರದ ಇಂಥ ದೃಢ ನಿರ್ಧಾರದಿಂದ ಎಲ್ಲ ಕಡೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಈ ಹಿಂದೆ ನಗರ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಅನುಕೂಲವಿತ್ತು. ಈಗ ಗ್ರಾಮೀಣ ಭಾಗದಲ್ಲೂ ಅನುಕೂಲವಿದೆ. ಅದನ್ನು ವಿದ್ಯಾರ್ಥಿಗಳ ಪಾಲಕರು ಸದುಪಯೋಗಪಡಿಸಿಕೊಂಡಲ್ಲಿ ಪ್ರತಿ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣ ಪಡೆಯುತ್ತಾರೆ ಎಂದು ತಿಳಿಸಿದರು.
ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ದುಗ್ಗಪ್ಪ ಗೌಡ ಮಾತನಾಡಿ, ಶಾಲೆಗಳು ಒಂದಕ್ಕೊಂದು ಪೈಪೋಟಿ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹೇಮಂತ್‌ಚಂದ್ರ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚೆನ್ನಕೇಶವ ಗೌಡ, ಗ್ರಾಪಂ ಅಧ್ಯಕ್ಷ ಪ್ರದೀಪ್, ಮುಖಂಡರಾದ ಎಂ.ವಿ.ಜಗದೀಶ್, ಪರೀಕ್ಷಿತ್ ಜಾವಳಿ, ಶಶಿಧರ್, ಮನೋಹರ್, ಶ್ರೀನಾಥ್, ಗಿಲ್ಬರ್ಟ್ ಲೋಬೊ, ಕೇಶವ ಗೌಡ, ಮುಖ್ಯಶಿಕ್ಷಕ ಸುರೇಶ್, ಸಹ ಶಿಕ್ಷಕರಾದ ಯೋಗೇಶ್, ಗೌರಿಬಾಯಿ, ಸತೀಶ್, ಸಾಗರ್, ಆಶಾ ಕಿರಣ್ ಇತರರಿದ್ದರು.