

ತ್ಯಾಮಗೊಂಡ್ಲು: ಸೋಲೇ ಗೆಲುವಿನ ಸೋಪಾನ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯಪಾಲನೆ ಎರಡೂ ಅಮೂಲ್ಯ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಹಾಗೂ ಐಕ್ಯೂಎಸಿಯಿಂದ ಗುರುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಯಾರಿ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈನಂದಿನ ಪ್ರಚಲಿತ ವಿಷಯಗಳ ಬಗ್ಗೆ ಅಂದೆ ಮನನ ಮಾಡಿಕೊಳ್ಳಬೇಕು. ಇದಕ್ಕೆ ಸಹಾಯವಾಗಿ ದಿನಪತ್ರಿಕೆಗಳ ಓದು ಬಹಳ ಮುಖ್ಯ ಎಂದ ಅವರು, ಪಿಎಸೈ ಆಗಿದ್ದ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾದ ಬಗೆ ಮತ್ತು ಅದರಲ್ಲಿ ಯಶಸ್ಸು ಗಳಿಸಿದ ಸ್ವ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪರಿಶ್ರಮವಿರದೆ ಯಶಸ್ಸುಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಆಶಾವಾದಿಗಳಾಗಿ, ಸ್ವಾವಲಂಬಿಗಳಾಗಿ ಮತ್ತು ಇತರರಿಗೆ ಮಾದರಿಯಾಗಿ ಬದುಕಬೇಕು. ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತಯಾರಾದರೆ ಇಲಾಖಾ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಆದ್ದರಿಂದ ಗುರಿ ಯಾವಾಗಲೂ ಉನ್ನತವಾಗಿದ್ದರೆ ಸಾಧನೆ ಕೂಡ ಅದೇ ರೀತಿ ಇರುತ್ತದೆ ಎಂದರು.
ವಿದ್ಯಾರ್ಥಿಗಳು ಓದನ್ನು ಸರಳ ಮಾಡಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಮೂಲ ಮಾಹಿತಿ ಸಂಪೂರ್ಣವಾಗಿ ಕಲೆ ಹಾಕಿ ಗುರುತು ಮಾಡಿಕೊಳ್ಳಬೇಕು. ಪ್ರಾಥಮಿಕ ತರಗತಿಗಳ ಪಠ್ಯಗಳನ್ನು ಓದಬೇಕು. ದೈನಿಕ ಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ವಿಷಯಗಳನ್ನು ಗುರುತು ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ನಿಯಮಾನುಸಾರ ಓದಬೇಕು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಓದು ಬಹಳ ಮುಖ್ಯ ಹಾಗೂ ಬೆಳಗಿನ ಜಾವದ ಓದು ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಪ್ರಾಂಶುಪಾಲರಾದ ಪ್ರೊ. ಬಸವರಾಜು ಕೆ.ಸಿ. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ, ಓದಿಗೆ ಸಮರ್ಪಣೆ, ಸಮಯ ಪರಿಪಾಲನೆ, ಶಿಸ್ತು ವೇಳಾಪಟ್ಟಿಯ ಅನುಸರಣೆಯ ಅತ್ಯವಶ್ಯಕತೆಯ ಬಗ್ಗೆ ತಿಳಿ ಹೇಳಿದರು.
ಆರ್‌ಐ ಮಹೇಶ್‌ಕುಮಾರ್, ಗ್ರಾಮ ಲೆಕ್ಕಿಗರಾದ ಪಾರ್ಥಸಾರಥಿ, ವಾಸುದೇವ್, ಬಸವಮೂರ್ತಿ, ಪ್ರಾಧ್ಯಾಪಕರಾದ ಜಿ.ವಿ.ಶಿವರುದ್ರಯ್ಯ, ಪ್ರೊ.ರಮೇಶ್, ರಾಜಕುಮಾರ್, ಪ್ರೊ.ಚನ್ನೇಗೌಡ, ಅರವಿಂದ್, ವೀಣಾ ಇದ್ದರು.