ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ

29Rajesh9
Published on

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಮ್ಸ್) ಕಾಲೇಜು ವತಿಯಿಂದ 2019ನೇ ಬ್ಯಾಚ್‌ನ ಅಭ್ಯುದಯನ್ಸ್ ವಿದ್ಯಾರ್ಥಿಗಳಿಗೆ ಮಂಗಳವಾರ ವೈದ್ಯಕೀಯ ಪದವಿ ಪ್ರದಾನ ಮಾಡಲಾಯಿತು.

ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ನಡೆದ 4ನೇ ಘಟಿಕೋತ್ಸವದ ಪರ್ವ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ 150 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು.

2019ರ ಬ್ಯಾಚಿನ ಟಾಪರ್‌ಗಳಾಗಿ ಹೊರ ಹೊಮ್ಮಿದ ಡಾ. ಸಿ.ಜೆ. ಕೇಶವ್, ಡಾ. ಮೇಹಾ ಜೋಶಿಪುರ, ಡಾ. ಎನ್. ವಿನುತಾ, ಡಾ. ಪ್ರತೀಕ್ ಗೌಡ, ಡಾ. ಆರ್ ಸುಶ್ಮಿತ ಮತ್ತು ಡಾ. ಯು. ಸಹನಾ ಅವರಿಗೆ ಪದವಿ, ಪಾರಿತೋಷಕ ಮತ್ತು ವಿವಿಧ ವಿಷಯಗಳಲ್ಲಿ ಆರ್.ಜಿ.ಯು.ಎಚ್.ಎಸ್ ರಾಜ್ಯಮಟ್ಟದ ಶ್ರೇಣಿಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್ ಮಾತನಾಡಿ, ತಂದೆ-ತಾಯಿ ಪೋಷಕರ ಒತ್ತಾಸೆ ಮೇರೆಗೆ ವೈದ್ಯಕೀಯ ಪದವಿ ಪಡೆದು ಈ ಸಮಾಜದಲ್ಲಿ ಪ್ರಕೃತಿ ಸೇವೆ ಮಾಡಲು ಮುಂದೆ ಬಂದಿದ್ದೀರಿ, ನಿಮ್ಮ ಉದ್ದೇಶ, ಕನಸು ಸಾಕಾರಗೊಳ್ಳಲಿ. ವೈದ್ಯಕೀಯ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಿ, ಆ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡಲು ಆದ್ಯತೆ ನೀಡುವಂತೆ ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಮಾತನಾಡಿ, ಭಾರತ ಶೇ. 80ರಷ್ಟು ಹಳ್ಳಿಗಳಿಂದ ಕೂಡಿರುವ ದೇಶವಾಗಿದೆ. ವೈದ್ಯಕೀಯ ಪದವಿ ಪಡೆದಿರುವ ನೂತನ ವೈದ್ಯರು ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ವೈದ್ಯರೆಂದ ಮೇಲೆ ಸೇವಾವಧಿಯಲ್ಲಿ ಮಾನಸಿಕ, ದೈಹಿಕ ಒತ್ತಡ ಸಹಜ. ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ವೃತ್ತಿಯಲ್ಲಿ ಮಾನವೀಯತೆ ಮೈಗೂಡಿಸಿಕೋಳ್ಳಬೇಕು ಎಂದರು.

ಮುಖ್ಯ ಆಡಳಿತಾಧಿಕಾರಿ ನಂಜುಂಡೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೆ.ಆರ್. ಮಹೇಶ, ಅರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಮಾರುತಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ರಾಜೇಶ್, ಡಾ. ದರ್ಶನ್, ಡಾ. ರಮೇಶ್, ಡಾ. ನವೀನ್, ಡಾ. ಮಹಮ್ಮದ್ ಶರೀಫ್, ಡಾ. ಪ್ರಭಾ, ಡಾ. ಅಭಿಷೇಕ್, ಡಾ. ತೃಪ್ತಿ, ಡಾ. ಚಂದ್ರಕಲಾ, ಡಾ. ದಮಯಂತಿ ಉಪಸ್ಥಿತರಿದ್ದರು.

ವೈದ್ಯಕೀಯ ಪದವಿ ಪಡೆದ ನಿಮ್ಮ ಸೇವೆಯ ಹೊಸ ಅಧ್ಯಾಯ ಇಂದಿನಿಂದ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯವಾಗಿದೆ. ದೇಶಕ್ಕೆ ಮಾದರಿಯಾಗುವಂತಹ ಆರೋಗ್ಯ ಸೇವೆ ನೀಡಿಕೆಗೆ ಮುಂದಾಗಬೇಕು. ಡಾ.ಎಚ್.ಸಿ.ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net