

ಬಸವಕಲ್ಯಾಣ: ಒಂಬತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ ೧ರಿಂದ (ಎಸ್ಸೆಸ್ಸೆಲ್ಸಿ ) ವಿಶೇಷ ತರಗತಿ ನಡೆಸಬೇಕು ಎನ್ನುವ ವಿಚಾರ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಬಸವಕಲ್ಯಾಣ ತಾಲೂಕು ಮತ್ತು ಹುಲಸೂರು ತಾಲೂಕು ಘಟಕ ಮನವಿ ಮಾಡಿದೆ.
ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿಯ ನಿಯೋಗ ಮಂಗಳವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಬೇಡಿಕೆ ಕುರಿತು ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ ಅವರಿಗೆ ಸಲ್ಲಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಸಿಗೆ ಬಿಸಿಲಿನ ತಾಪ ಹೆಚ್ಚಿರುವುದರಿಂದ ಮಧ್ಯಾಹ್ನ ಮನೆಯಿಂದ ಹೊರ ಬರದಂತೆ ರಾಜ್ಯದ ಆರೋಗ್ಯ ಸಚಿವರು ಸಲಹೆ ನೀಡಿದ್ದಾರೆ. ಇಂಥ ಸಂದರ್ಭದಲ್ಲಿ ಮಕ್ಕಳು ಬಿಸಿಲಿನಲ್ಲಿ ಬರುವುದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿನಂತಿ ಮಾಡಿದೆ.
ಬಸವಕಲ್ಯಾಣ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಮಾನೆ, ಕಾರ್ಯದರ್ಶಿ ಬಸವರಾಜ ಮಾನೊಳೆ, ಹಲಸೂರು ತಾಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಕಾರ್ಯದರ್ಶಿ ಮದನಕುಮಾರ ಪಾಟೀಲ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಜಯಕುಮಾರ ಪಟ್ನೆ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಧಾಕರ್ ಮುಳೆ, ಜಿಲ್ಲಾ ಸಂಘಂಟನಾ ಕಾರ್ಯದರ್ಶಿ ಮಾಧವ ಗಣೇಶ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರ ಪಾತಂಗೆ, ಸುನಿತಾ ರೆಡ್ಡಿ, ಉಷಾ ಬಂದೆ, ಅನಿತಾ ಸೂರ್ಯವಂಶಿ, ಸುಜಾತ ಪಾಟೀಲ್, ನಾಗಪ್ಪ ನಿಣ್ಣೆ, ಮಲ್ಲಿಕಾರ್ಜುನ ಬೆಳಗಲ್ಲ, ಸತೀಶ ಪಾಟೀಲ್, ಆನಂದ ಪತ್ತಾರ್, ಸುಧಾಕರ್, ವೀರೇಶ ಹೆಗ್ಗೆ, ರಾಮ ಪಾಟೀಲ್, ಸಾಮ ಕರಬಾರಿ ಇತರರಿದ್ದರು.