

ನೆಲಮಂಗಲ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಬದಲಾವಣೆಯಲ್ಲಿ ರೋಟರಿಯ ವಿದ್ಯಾನಿಧಿ ಪುಸ್ತಕ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ರೋಟರಿ ಹಾಗೂ ಬೆಂಗಳೂರು ರೋಟರಿ ನಂದಿನಿ ಲೇಔಟ್, ರೋಟರಿ ಓಯಾಸಿಸ್ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾನಿಧಿ ಶೀರ್ಷಿಕೆಯಡಿ ಹೊರತಂದಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಭ್ಯಾಸ ಕೋಶ, ಪರೀಕ್ಷಾ ಸಿದ್ಧತಾ ಸಾಧನ ಪುಸ್ತಕಗಳನ್ನು ಶನಿವಾರ ವಿತರಿಸಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸವನ್ನು ಸಂಘ-ಸಂಸ್ಥೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ರೋಟರಿ ಕ್ಲಬ್ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಪ್ರೌಢಶಾಲೆ ಶಿಕ್ಷಕರ ಜತೆ ಸಭೆ ನಡೆಸಿ ಪುಸ್ತಕಗಳ ಸದ್ವಿನಿಯೋಗಪಡಿಸಿಕೊಳ್ಳಲು ಸೂಚಿಸಲಾಗುವುದು. ವಿದ್ಯಾರ್ಥಿಗಳು, ಪರೀಕ್ಷಾ ಸಿದ್ಧತಾ ಪುಸ್ತಕಗಳ ಪ್ರಯೋಜನ ಪಡೆದುಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದರು.
ಬೆಂಗಳೂರು ನಂದಿನಿ ಲೇಔಟ್ ರೋಟರಿ ಕ್ಲಬ್ ಅಧ್ಯಕ್ಷ ರೋಟರಿ ಕೃಷ್ಣಮೂರ್ತಿನಾಯಕ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದ ತಿರುವು. ಇದನ್ನು ಮನಗಂಡ ರೋಟರಿ ಕ್ಲಬ್ ಗುಣಮಟ್ಟದ ಫಲಿತಾಂಶ ಪಡೆಯಲು ನೆರವಾಗಬಲ್ಲ ಪರೀಕ್ಷಾ ಸಿದ್ಧತಾ ಸಾಧನ ಪುಸ್ತಕಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಸಿದ್ಧಪಡಿಸಿದ್ದ ಸರ್ಕಾರಿ ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ ಎಂದು ತಿಳಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು, ತಾಲೂಕಿನ ಸೋಲದೇವನಹಳ್ಳಿ, ಗೊಲ್ಲಹಳ್ಳಿ ಬೈಲಾಂಜನೇಯ ಪ್ರೌಢಶಾಲೆ, ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ, ಟಿ.ಬೇಗೂರು, ಬರದಿಮಂಡಿಗೆರೆ, ಬೆಂಗಳೂರು ಉತ್ತರ ತಾಲೂಕಿ ಸೊಂಡೆಕೊಪ್ಪ ಗ್ರಾಮದ ಚೆನ್ನಕೇಶವ ಪ್ರೌಢಶಾಲೆ, ಹುಸ್ಕೂರು ಬಸವ ಪ್ರೌಢಶಾಲೆಗಳ ಒಟ್ಟು 717 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪುಸ್ತಕ ವಿತರಣೆ ಮಾಡುತ್ತಿರುವುದಾಗಿ ನೆಲಮಂಗಲ ರೋಟರಿ ಅಧ್ಯಕ್ಷ ವಿ.ಆರ್.ಸ್ವಾಮಿ ಮಾಹಿತಿ ನೀಡಿದರು.
ಬೆಂಗಳೂರು ನಂದಿನಿ ಲೇಔಟ್ ರೋಟರಿ ಕ್ಲಬ್ ಕಾರ್ಯದರ್ಶಿ ಗಿರೀಶ್, ಓಯಾಸಿಸ್ ರೋಟರಿ ಕ್ಲಬ್ ನಿರ್ದೇಶಕರಾದ ಪೂರ್ಣಿಮಾ, ಶಿವಮೂರ್ತಿ, ನರಸಿಂಹಮೂರ್ತಿ, ತಾಲೂಕು ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ಕಾರ್ಯದರ್ಶಿ ಕೆಂಪೇಗೌಡ, ಖಜಾಂಚಿ ಎಂ.ಟಿ.ನವೀನ್‌ಕುಮಾರ್, ನಿರ್ದೇಶಕರಾದ ಎಸ್.ಗಂಗರಾಜು, ಪುಟ್ಟಸ್ವಾಮಿ, ಎಲ್.ಕುಮಾರ್, ಶಿವಶಂಕರ್, ಸೋಮಶೇಖರ್, ಚಂದ್ರಕಾಂತ್, ನಾಗರಾಜು, ಮಾಜಿ ಅಧ್ಯಕ್ಷ ಸಿ.ಜಿ.ಮಂಜುನಾಥ್‌ಗೌಡ, ಇನ್ನರ್ ವೀಲ್ ಅಧ್ಯಕ್ಷೆ ದಿವ್ಯಾ, ಸದಸ್ಯರಾದ ವನಿತಾ, ಸಹೇರಾ, ಶಿಕ್ಷಕರಾದ ರೇಣುಕೇಶ್, ಎಚ್.ಕೆ.ನಾಗೇಶ್ ಮತ್ತಿತರರು ಇದ್ದರು.