

ಶನಿವಾರಸಂತೆ: ಹೋಬಳಿಯ ವಿವಿಧ ಪ್ರೌಢಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಮಿಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಗೌರಮ್ಮ ಶಾಂತಮಲ್ಲಪ್ಪ ಸಭಾಂಗಣದಲ್ಲಿ ಬುಧವಾರ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದ ಕೊಡ್ಲಿಪೇಟೆ ವಿದ್ಯಾಸಂಸ್ಥೆ ನಿರ್ದೇಶಕ ಯತೀಶ್ ಕುಮಾರ್, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಅರಿವು ಅಗತ್ಯ. ಅಲ್ಲದೆ ವಿಜ್ಞಾನ ಪ್ರಯೋಗದ ಬಗ್ಗೆಯೂ ಅರಿವು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಳ ಮೂಲಕ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಹಾಸನದ ನಿವೃತ್ತ ವಿಜ್ಞಾನ ಶಿಕ್ಷಕ ಪಾರ್ಥಸಾರಥಿ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ ಸಂಜೆ 4.30 ರವರೆಗೆ ನಿರಂತರವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿವಿಧ ಪ್ರಕಾರಗಳ ಬಗ್ಗೆ ಪ್ರಯೋಗಿಕವಾಗಿ ಅರಿವು ಮೂಡಿಸಲಾಯಿತು.
ಕೊಡ್ಲಿಪೇಟೆ ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಅಬ್ದುಲ್ ರಬ್, ಅರಕಲಗೂಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್‌ಕುಮಾರ್, ವಿವಿಧ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು.