

ಬೆಟ್ಟದಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಉಪಪ್ರಾಂಶುಪಾಲ ಬಿ.ಎಸ್.ರೇವಣ್ಣ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸದೃಢವಾಗಿ ನಿಲ್ಲಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಅಡಿಪಾಯ. ಅದನ್ನು ಭದ್ರ ಮಾಡಿಕೊಂಡರೆ ಮುಂದಿನ ಜೀವನ ಸುಖಕರವಾಗಿರುತ್ತದೆ ಎಂದರು.
ಈ ಬಾರಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಐದು ಸಾವಿರ ರೂ.ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ನಾರಾಯಣಗೌಡ ಮಾತನಾಡಿದರು. ಇದೇ ವೇಳೆ ಅಮೋಘವರ್ಷ, ಅಮೃತವರ್ಷಿಣಿ ಸೇವಾ ಪ್ರತಿಷ್ಠಾನ ವತಿಯಿಂದ ಹತ್ತನೇ ತರಗತಿಯ 118 ವಿದ್ಯಾರ್ಥಿಗಳಿಗೆ ನೀಡಲಾದ ಲೇಖನ ಸಾಮಗ್ರಿಗಳನ್ನು ಶಿಕ್ಷಕ ಗೊರಳ್ಳಿ ಜಗದೀಶ್ ವಿತರಣೆ ಮಾಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕುಮಾರಿ, ಸದಸ್ಯರಾದ ಪುಷ್ಪಾ ಚೆಲುವನಾಯಕ್, ವಜಿರಾಬಾನು, ರಾಜೇಂದ್ರ, ಶಿಕ್ಷಕರಾದ ನಿಂಗರಾಜು, ಸೋಮಯ್ಯನಾಯಕ, ಅಮಿತ್, ರೂಪಕುಮಾರಿ, ಮಮತಾನಾಯಕ್, ಜ್ಯೋತಿ, ಕಿರಣ್, ಮೋಹನ್‌ಕುಮಾರ್, ಕಾವ್ಯಾ, ಸ್ನೇಹಾ, ಮಹೇಂದ್ರ ಇದ್ದರು.