ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಅವಶ್ಯ

6ark1
ಅರಕಲಗೂಡು ತಾಲೂಕು ಬರಗೂರು ಮುರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಗಿಡ ನೆಟ್ಟು ನೀರೆರೆದರು. ಗಿರೀಶ್, ಪಾಂಡುರಂಗ, ಮೋಹನ್, ಬಸವರಾಜು ಇತರರಿದ್ದರು.
Published on

ಅರಕಲಗೂಡು : ಮನುಕುಲದ ಉಳಿವಿಗೆ ಪರಿಸರ ಮಹತ್ವದ ಜತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯವಶ್ಯಕ ಎಂದು ಸ್ವಾಸ್ಥೃ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಬರಗೂರು ಮುರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ವಿವಿಧ ಜಾತಿ ಗಿಡಗಳನ್ನು ನೆಟ್ಟು ನಂತರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಸನ್ಮಾನಿಸಿ ಮಾತನಾಡಿದರು. ಕಾಂಪೌಂಡ್ ಸೌಲಭ್ಯ ಹೊಂದಿದ ಅನೇಕ ಶಾಲಾ- ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಗಿದೆ. ಶಿಕ್ಷಕರು, ಮಕ್ಕಳು ಅವುಗಳ ಪಾಲನೆ ಮಾಡಿ ಪರಿಸರ ಬೆಳೆಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಕ್ಕಳು ಅಂಕ ಗಳಿಕೆಗಷ್ಟೇ ಸೀಮಿತವಾಗದೆ ಕಲಿತದ್ದನ್ನು ಚೆನ್ನಾಗಿ ಅರ್ಥೈಸಿಕೊಳ್ಳುವುದು ಮುಖ್ಯ. ಶಿಕ್ಷಕರು ಮಕ್ಕಳಿಗೆ ಜವಾಬ್ದಾರಿ ಕಲಿಸಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಇದಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳಲ್ಲದೆ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಪ್ರಾಂಶುಪಾಲ ಗಿರೀಶ್ ಮಾತನಾಡಿ, ವಿಜ್ಞಾನದ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಕಾಡು ಬೆಳೆಸಬೇಕಾಗಿದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜತೆಗೆ ಪರಿಸರ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಬಸವರಾಜು, ತಾಪಂ ಮಾಜಿ ಸದಸ್ಯರಾದ ಪಾಂಡುರಂಗ, ವೀರೇಶ್, ಎಚ್. ಮಾದೇಶ್, ಮೋಹನ್, ದಶರಥ, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net