ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ದೂರದೃಷ್ಟಿ ಇರಬೇಕು:ಡಾ.ಎಚ್.ಎಲ್. ಮಲ್ಲೇಶ್ ಗೌಡ

ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ದೂರದೃಷ್ಟಿ ಇರಬೇಕು:ಡಾ.ಎಚ್.ಎಲ್. ಮಲ್ಲೇಶ್ ಗೌಡ
Published on

ಹಾಸನ : ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಯನ್ನು ಎದುರಿಸುವ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ನಡೆದ ಕುವೆಂಪು ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ದೂರದೃಷ್ಟಿ ಇರಬೇಕು. ಮುಂದಿನ ದಿನಗಳಲ್ಲಿ ಗೌರವಾನ್ವಿತ ಬದುಕು ನಡೆಸುವ ನಿಟ್ಟಿನಲ್ಲಿ ಎಲ್ಲರ ಗಮನ ಇರಲಿ ಎಂದು ಸಲಹೆ ನೀಡಿದರು.

ವೃತ್ತಿಯಲ್ಲಿ ಶ್ರೇಷ್ಠ ಕನಿಷ್ಠ ಎಂಬುದು ಯಾವುದೂ ಇಲ್ಲ. ತಮ್ಮ ಶಿಕ್ಷಣ ಹಾಗೂ ಬುದ್ಧಿವಂತಿಕೆಗೆ ಅನುಗುಣವಾಗಿ ತಾವು ಮಾಡುವ ಕಾಯಕವನ್ನು ನಿಷ್ಟೆಯಿಂದ ಮಾಡಿದರೆ ಅದಕ್ಕಿಂತ ತೃಪ್ತಿದಾಯಕ ಜೀವನ ಮತ್ತೊಂದಿಲ್ಲ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಸೋಮಶೇಖರ್ ದೇಸಾಯಿ ಮಾತನಾಡಿ, ಪ್ರತಿ ವ್ಯಕ್ತಿ ತನ್ನ ಮಾತೃ ಭಾಷೆಗೆ ಗೌರವ ನೀಡಬೇಕು. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಹಂತ ಹಂತವಾಗಿ ಬದಲಾವಣೆ ಕಂಡುಕೊಂಡವರೆ ನಿಜವಾದ ವಿದ್ಯಾರ್ಥಿ. ಉತ್ತಮ ವ್ಯಕ್ತಿತ್ವ ಅಳವಡಿಸಿಕೊಂಡವರು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಕಾರ್ಯದರ್ಶಿ ಶಿವರಾಮೇಗೌಡ, ಪ್ರಶಾಂತ್ ಕುಮಾರ್, ಪುಟ್ಟಸ್ವಾಮಿ, ನಾಗಮ್ಮ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net