

ಇ-ಕಲಿಕಾ ಯುಗಕ್ಕೆ ಹೊಂದಿಕೊಳ್ಳಲು ಮೈಸೂರು ವಿಶ್ವವಿದ್ಯಾಲಯ ಸಹ ಡಿಜಿಟಲ್ ಕಲಿಕೆಗೆ ತೆರೆದುಕೊಳ್ಳುತ್ತಿದ್ದು, ಉನ್ನತ ಶಿಕ್ಷಣ ಪಡೆಯುತ್ತಿರುವ ತನ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಮೊಬೈಲ್ ಆ್ಯಪ್’ ಸಿದ್ಧಪಡಿಸಲು ಮುಂದಾಗಿದೆ.
ಈಗಾಗಲೇ ಬೆಳಗಾವಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದಲ್ಲಿರುವ ಬಹಳಷ್ಟು ವಿಶ್ವವಿದ್ಯಾಲಯಗಳು ಆ್ಯಪ್ ರೂಪಿಸಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಿಕೊಟ್ಟಿವೆ. ತಡವಾಗಿದರೂ ಈ ನಿಟ್ಟಿನಲ್ಲಿ ಮೈವಿವಿ ಸಹ ಹೆಜ್ಜೆ ಇಟ್ಟಿದೆ.
ತಂತ್ರಜ್ಞಾನದ ಆವಿಷ್ಕಾರದೊಂದಿಗೆ ವಿಶ್ವವಿದ್ಯಾಲಯವು ಮುನ್ನಡೆಯಬೇಕಾಗಿದೆ. ಇದು ಶೈಕ್ಷಣಿಕ ಪ್ರಗತಿಯನ್ನು ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಆ್ಯಪ್ ಪರಿಚಯಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಆ್ಯಪ್ ಅಭಿವೃದ್ಧಿಪಡಿಸಲು ಟೆಂಡರ್ ಕರೆದು ವಿವಿಧ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಆ್ಯಪ್ ಬಳಕೆಗೆ ತರುವ ಗುರಿ ಹಾಕಿಕೊಳ್ಳಲಾಗಿದೆ.
ಆ್ಯಪ್‌ಗೆ ಇನ್ನೂ ಹೆಸರು ಸೂಚಿಸಿಲ್ಲ. ‘ಮಾನಸಗಂಗೋತ್ರಿ’ ಹೆಸರು ಇಡುವ ಕುರಿತು ಸಮಾಲೋಚಿಸಲಾಗುತ್ತಿದೆ. ಆ್ಯಪ್ ಸಿದ್ಧಪಡಿಸಿದ ಬಳಿಕ ಹೆಸರು ಸಹ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ಆ್ಯಪ್ ಬಳಕೆಯಿಂದ ವಿದ್ಯಾರ್ಥಿಗಳಿಗೆ ವಿವಿಧ ಪ್ರಯೋಜನ ದೊರೆಯಲಿದೆ. ಕಲಿಕೆಗೆ ಅವಶ್ಯವಿರುವ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದ ಉತ್ತಮ ಪ್ರಾಧ್ಯಾಪಕರ ಬೋಧನೆಯನ್ನು ಆಲಿಸಬಹುದು ಅಥವಾ ವೀಕ್ಷಿಸಬಹುದು. ಕಲಿಕಾ ಸಾಮಗ್ರಿಗಳನ್ನು ಪಿಡಿಎಫ್ ಆವೃತ್ತಿಯಲ್ಲಿ ಓದಬಹುದು. ಅದನ್ನು ಡೌನ್‌ಲೋಡ್ ಮಾಡಿ ಅಭ್ಯಾಸ ಮಾಡಬಹುದಾಗಿದೆ. ಪಠ್ಯಕ್ರಮಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆ್ಯಪ್ ಮೂಲಕವೇ ಒಂದೇ ಬಾರಿಗೆ ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸುವ ಸಾಧನವಾಗಿಯೂ ಇದನ್ನು ಬಳಸಿಕೊಳ್ಳಲಾಗುತ್ತದೆ.
ಈ ಆ್ಯಪ್ ಸೌಲಭ್ಯದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ವ್ಯವಸ್ಥೆ ಒದಗಿಸಲು ಮೈವಿವಿ ಉತ್ಸುಕವಾಗಿದೆ. ಇತ್ತೀಚೆಗೆ ನಡೆದ ಮೈವಿವಿ ಸಿಂಡಿಕೇಟ್ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ದೊರೆತಿದೆ.
ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಕಾಲೇಜುಗಳು, ಸಂಸ್ಥೆಗಳಲ್ಲಿ, ಸ್ನಾತಕ ಪದವಿ ಘಟಕ, ಸಂಯೋಜಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದನ್ನು ಬಳಕೆ ಮಾಡಿಕೊಳ್ಳಬಹುದು. ಶೈಕ್ಷಣಿಕ ಹಿತದೃಷ್ಟಿಯಿಂದ ಡಿಜಿಟಲ್ ಅಕಾಡೆಮಿಕ್ ಪ್ಲಾಟ್‌ಫಾರ್ಮ್ ತೆರೆಯಲಾಗುತ್ತಿದೆ. ಸ್ನಾತಕ ಪದವಿಯ 5,250 ಮತ್ತು ಸ್ನಾತಕೋತ್ತರ ಪದವಿಯ 3,623 ಸೇರಿದಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಅಂದಾಜು 10,946 ವಿದ್ಯಾರ್ಥಿಗಳಿಗೆ ಈ ಆ್ಯಪ್‌ನಿಂದ ಪ್ರಯೋಜನವಾಗಲಿದೆ.
ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ನಲಿದಾಡುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ಫೋಟೋ, ವಿಡಿಯೋ, ಸಿನಿಮಾ ನೋಡಲು ಹೆಚ್ಚು ಉಪಯೋಗವಾಗುತ್ತಿದೆ. ಈ ರೀತಿ ಮೊಬೈಲ್ ಚಟವು ವಿದ್ಯಾರ್ಥಿಗಳ ಕಲಿಕೆ, ಶಿಕ್ಷಣದ ಗುಣಮಟ್ಟದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಶೈಕ್ಷಣಿಕ ಚಟುವಟಿಕೆಗಳ ಬಳಕೆಗ ಮೊಬೈಲ್ ಸಾಧನವನ್ನು ಸದ್ವಿನಿಯೋಗವಾಗುವಂತೆ ಮಾಡುವ ಪ್ರಯತ್ನವೂ ಈ ಉಪ ಕ್ರಮ ಹಿಂದೆ ಅಡಗಿದೆ.
ಈಗಾಗಲೇ ಮಾನಸಗಂಗೋತ್ರಿಯ ಎಲ್ಲ ಅಧ್ಯಯನ ವಿಭಾಗಗಳು, ಆಡಳಿತ ಶಾಖೆಗಳು ಮತ್ತು ಗ್ರಂಥಾಲಯಗಳು ಉತ್ತಮ ಹೈಸ್ಪೀಡ್ ಇಂಟರ್‌ನೆಟ್ ಮತ್ತು ವೈಫೈ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ಮೊಬೈಲ್ ಆ್ಯಪ್ ಮೂಲಕ ಸುಲಭ, ಸರಳವಾಗಿ ಕಲಿಕಾ ಸಾಮಗ್ರಿಗಳು ವಿದ್ಯಾರ್ಥಿಗಳಿಗೆ ಕೈ ಸೇರುವಂತೆ ಮಾಡಲಾಗುತ್ತಿದೆ. ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ.
ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು, ಗುಣಮಟ್ಟದ ಡಿಜಿಟಲ್ ಕಲಿಕೆಗಾಗಿ ಖಾನ್ ಅಕಾಡೆಮಿಯ ಸಹಯೋಗದಲ್ಲಿ ಜ್ಞಾನಸೇತು ಕಾರ್ಯಕ್ರಮವನ್ನು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಅಂತೆಯೇ ಕೇಂದ್ರ ಸರ್ಕಾರದ ‘ದೀಕ್ಷಾ’ ಆ್ಯಪ್ ಬಳಕೆಯಲ್ಲಿ ಇದೆ. ಇದರ ಮೂಲಕ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ‘ಪರೀಕ್ಷಾ ಅಭ್ಯಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದೆ. ಇದು ಕಲಿಕಾ ಸುಧಾರಣೆಗೆ ಫಲಕೊಟ್ಟಿದೆ.
ವಿವಿಯಲ್ಲಿ ಡಿಜಿಟಲ್ ಅಕಾಡೆಮಿಕ್ ಪ್ಲಾಟ್‌ಫಾರ್ಮ್ ಪರಿಚಯಿಸಲಾಗುತ್ತಿದೆ. ಅದಕ್ಕಾಗಿ ಮೊಬೈಲ್ ಆ್ಯಪ್ ಅಪ್ಲಿಕೇಷನ್ ರೂಪಿಸಲಾಗುತ್ತಿದೆ. ಇದನ್ನು ಸಿದ್ಧಪಡಿಸಿಕೊಡಲು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಈ ಸೌಲಭ್ಯ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗುವುದು.ಪ್ರೊ.ಎನ್.ಕೆ.ಲೋಕನಾಥ್ಕುಲಪತಿ, ಮೈಸೂರು ವಿಶ್ವವಿದ್ಯಾಲಯ