

ಸೋಮವಾರಪೇಟೆ: ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ವತಿಯಿಂದ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಾಗಾರವನ್ನು ಸಂತ ಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾದರ್ ಅವಿನಾಶ್ ಉದ್ಘಾಟಿಸಿ, ವಿದ್ಯಾರ್ಥಿ ದಿಸೆಯಿಂದಲೇ ಎಲ್ಲರೂ ವೇದಿಕೆಯಲ್ಲಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಮುಂದೆ ಸಾರ್ವಜನಿಕರ ವೇದಿಕೆಯಲ್ಲಿ ಸುಲಭವಾಗಿ ಮಾತನಾಡಬಹುದು. ತಮಗೆ ಸಿಕ್ಕ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ವಲಯ ಮಟ್ಟದ ತರಬೇತುದಾರರಾದ ಪ್ರಶಾಂತ್ ಮಾತನಾಡಿ, ವೇದಿಕೆಯಲ್ಲಿ ಮಾತನಾಡುವುದು ಒಂದು ಕಲೆಯಾಗಿದೆ. ಆ ಕಲೆ ಒಲಿದರೆ ದೊಡ್ಡ ಸಾಧಕರಾಗಬಹುದು. ಮಾತನಾಡುವಾಗ ತಪ್ಪುಗಳಾಗುತ್ತವೆ ಎಂಬ ಭಯದಿಂದ ವಿದ್ಯಾರ್ಥಿಗಳು ಮಾತನಾಡಲು ಮುಂದೆ ಬರುವುದಿಲ್ಲ. ಮೊದಲು ನಾವು ಆ ಭಯವನ್ನು ಬಿಟ್ಟು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಜೇಸಿಐ ಪುಷ್ಪಗಿರಿ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಹರೀಶ್, ಜೇಸಿಐ ಕಾರ್ಯದರ್ಶಿ ವಿನುತಾ ಸುದೀಪ್, ಪದಾಧಿಕಾರಿಗಳಾದ ಜ್ಯೋತಿ ರಾಜೇಶ್, ಮಾಯಾ ಗಿರೀಶ್ ಮತ್ತು ನೆಲ್ಸನ್ ಇದ್ದರು.