

ನಾಪೋಕ್ಲು: ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಕ್ಷಿ ವೈವಿಧ್ಯತೆ ಮತ್ತು ಪ್ರಕೃತಿ ಎಂಬ ವಿಷಯದ ಕುರಿತು ವಿರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞರಾದ ಎಸ್.ವಿ.ಡಾ.ನರಸಿಂಹನ್ ಅವರು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ.
ವಿವಿಧ ರೀತಿಯ ಪಕ್ಷಿಗಳು, ಪಕ್ಷಿಗಳಿಗೂ ಪ್ರಕೃತಿಗೂ ಇರುವ ಸಂಬಂಧ ಈ ವಿಚಾರಗಳನ್ನು ಸ್ಲೈಡ್ ಶೋ ಮುಖಾಂತರ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕುಟ್ರ ಹಕ್ಕಿ, ಸೂರಕ್ಕಿ, ಕಾಜಾಣ, ಮಂಗಟ್ಟೆ ಹಕ್ಕಿ, ರಣಹದ್ದುಗಳು, ಅವುಗಳ ಕಾರ್ಯವೈಖರಿ, ಮರದ ಆರೋಗ್ಯ, ಪ್ರಕೃತಿ-ಮಾನವ ಜೀವಿಗಳ ಉಳಿವಿಗೆ ಕೀಟಗಳ ಅಗತ್ಯತೆ , ಹಕ್ಕಿಗಳಿಂದ ಕೀಟ ನಿಯಂತ್ರಣ, ಪರಾಗಸ್ಪರ್ಶ, ಬೀಜ ಪ್ರಸರಣ, ಹಕ್ಕಿಗಳಿಂದ ಪರಿಸರ ನೈರ್ಮಲ್ಯ, ಹಕ್ಕಿಗಳನ್ನು ನೋಡಿ ವಿಜ್ಞಾನ ಬೆಳೆದದ್ದು, ಈ ಮೊದಲಾದ ವಿಚಾರಗಳ ಬಗ್ಗೆ ಚಿತ್ರಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ನಂದೇಟಿರ ರಾಜ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದಿದ್ದು, ಸ್ವಚ್ಛತೆ ಎನ್ನುವುದು ಮನೆಯಿಂದಲೇ ಪ್ರಾರಂಭವಾಗಬೇಕು. ನಂತರ ಗ್ರಾಮ, ರಾಜ್ಯ, ರಾಷ್ಟ್ರಕ್ಕೂ ಈ ಸೇವೆಯನ್ನು ವಿಸ್ತರಿಸಬೇಕು ಎಂದರು.
ಮೂರ್ನಾಡು ಗ್ರಾಮಸ್ಥರಾದ ಬಡುವಂಡ ಸೀತಾದೇವಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಮಾಜ ಸೇವೆಯನ್ನು ಬೆಳೆಸುತ್ತದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಈರ ಸುಬ್ಬಯ್ಯ, ಸುಮಾ ಸುಂದರಿ, ಬಾಡಗ ಗ್ರಾಮಸ್ಥರಾದ ಕಂಭೀರಂಡ ಯೋಗೇಶ್, ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ ಕಾರ್ಯಕ್ರಮಾಧಿಕಾರಿ ದಮಯಂತಿ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.