

ಹುಬ್ಬಳ್ಳಿ: ದಾನ ಮಾಡುವ ಪ್ರವೃತ್ತಿ ಎಲ್ಲರಲ್ಲಿಯೂ ಇರಬೇಕು. ಪ್ರತಿಫಲಾಪೇಕ್ಷೆ ಇಲ್ಲದ ದಾನವೇ ಶ್ರೇಷ್ಠ ಎಂದು ಕ್ಷಮತಾ ಫೌಂಡೇಶನ್ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.
ಚಿಲ್ ವಾಟ್ಯ್ಆಪ್ ಗ್ರೂಪ್ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವೇಶ್ವರನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ಬುಕ್ಸ್ ಹಾಗೂ ಜಾಮೆಟ್ರಿ ಬಾಕ್ಸ್ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ದಾನದ ಸದುಪಯೋಗವನ್ನು ಪಡೆದವರು ಮುಂದೆ ಸ್ಥಿತಿವಂತರಾದಾಗ ಸಮಾಜಕ್ಕೆ ವಾಪಸ್ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನ್ಯೂ ಎಜುಕೇಶನ್ ಸೊಸೈಟಿ ನಿರ್ದೇಶಕ ಮಹೇಂದ್ರ ಕೌತಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ, ಗುರಿ, ಆತ್ಮವಿಶ್ವಾಸ ಮುಖ್ಯ ಎಂದರು. ಚಿಲ್ ವಾಟ್ಸ್ಆಪ್ ಗ್ರೂಪ್ ಎಲ್ಲ ವಾಟ್ಸ್ಆಪ್ ಗ್ರೂಪ್ಗಳಿಗೆ ಮಾದರಿ ಎಂದರು.
ಪ್ರೌಢಶಾಲೆ ಮುಖ್ಯ ಶಿಕ್ಷಕಿ ಡಿ.ಜಿ. ಕಮ್ಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕ ಆರ್.ವಿ.ಸಂಕಣ್ಣವರ ಸ್ವಾಗತಿಸಿದರು. ಹೇಮಾ ಕುಲಕರ್ಣಿ ನಿರೂಪಿಸಿದರು. ಎಸ್.ಆರ್.ಶೀಲವಂತರ ಪರಿಚಯಿಸಿದರು. ಎನ್.ಎಸ್. ಯಲಿಗಾರ ವಂದಿಸಿದರು. ಎಂ.ಪಿ. ಬಳ್ಳಾರಿ ನಿರೂಪಿಸಿದರು.
150 ವಿದ್ಯಾರ್ಥಿಗಳಿಗೆ 900 ನೋಟಬುಕ್ಸ್ ಹಾಗೂ ಜಾಮೆಟ್ರಿ ಬಾಕ್ಸ್ ವಿತರಿಸಲಾಯಿತು. ಗ್ರೂಪ್ನ ಸದಸ್ಯ ಹಿರೇನ್ ಎಸ್. ಪ್ರೌಢಶಾಲೆಗೆ 10 ಕುರ್ಚಿಗಳನ್ನು ದೇಣಿಗೆ ನೀಡಿದರು. ಸೀಮಾ ಕಟಾವಕರ್ ಯೋಗ ಮಾಹಿತಿ ಪುಸ್ತಕಗಳನ್ನು ವಿತರಿಸಿದರು.