

ಧರ್ಮಾಪುರ: ವಿದ್ಯಾರ್ಥಿಗಳಿಗೆ ಸದಾ ಜ್ಞಾನ ಹಾಗೂ ಕ್ರೀಡೆಯ ಹಸಿವಿರಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.
ರತ್ನಪುರಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಒಂ ಶ್ರೀಸಾಯಿ ಪಬ್ಲಿಕ್ ಶಾಲೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಬಡ್ಡಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನೂ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿರುವ ತಾಲೂಕಿನ ಏಕೈಕ ಕಬಡ್ಡಿ ಆಟಗಾರ. ನನಗೆ ಬಾಲ್ಯದಿಂದಲೇ ಕಬಡ್ಡಿ ತುಂಬ ಇಷ್ಟವಾದ ಕ್ರೀಡೆ ಎಂದರು.
ಓಂ ಶ್ರೀಸಾಯಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ದಿಲೀಪ್ ಮಾತನಾಡಿ, ಪಾಲಕರು ಮಕ್ಕಳ ಪ್ರತಿಭೆ ಗುರುತಿಸಿ ಸಹಕರಿಸಬೇಕು. ನಿಷ್ಠೆಯಿಂದ ಜೀವನ ನಡೆಸಲು ಶಿಕ್ಷಣ ಮುಖ್ಯ. ದೈಹಿಕ, ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ. ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ನಂಜನಗೂಡಿನ ಮಲ್ಕುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಆಯ್ಕೆಯಾದ ಎಲ್ಲ ಮಕ್ಕಳಿಗೂ ಶಾಸಕರು ಶೂ ವಿತರಿಸಿದರು.