

ಸಾಗರ: ವಿದ್ಯಾರ್ಥಿಗಳು ಸಾಸುವ ಛಲ, ಧೈರ್ಯದೊಂದಿಗೆ ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಗುರುರಾಜ ಕರಜಗಿ ಹೇಳಿದರು. ಸಾಗರ ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನೋತ್ಸಾಹ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಕಾಳಜಿ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು. ಸಾಸುವ ಮಾರ್ಗದಲ್ಲಿ ಆತ್ಮವಿಶ್ವಾಸ, ಧೈರ್ಯ, ಸದಾ ಜತೆಗಿರಬೇಕು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ತಕ್ಷಣ ಅಥವಾ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಜೀವನ ಅಲ್ಲ. ಯಾವುದೇ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯವಿದೆ ಎಂಬ ಮನೋಬಲ ಅಂತರಂಗದಿಂದ ಬರಬೇಕು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ. ಥಾಮಸ್ ಎಡಿಸನ್ ಸಾವಿರಾರು ಪ್ರಯೋಗದ ನಂತರ ಯಶಸ್ಸು ಕಂಡ. ಮೇರಿ ಕ್ಯೂರಿ, ಬಾಕ್ಸಿಂಗ್ ಚಾಂಪಿಯನ್ ಮಹಮ್ಮದ್ ಅಲಿ ಮುಂತಾದವರೆಲ್ಲರೂ ಕಠಿಣ ಪರಿಶ್ರಮದಿಂದಲೇ ಸಾಧನೆ ಮಾಡಿದ್ದಾರೆ. ಆರಂಭದಲ್ಲಿ ಕಷ್ಟ ಅನಿಸಿದರೂ ಮುಂದೆ ನಿಮ್ಮ ಪಾಲಿಗೆ ಸಂತೋಷ ಸಿಗುತ್ತದೆ. ತಮಗೋಸ್ಕರ ಬದುಕಿದವರನ್ನು ಪ್ರಪಂಚ ಮರೆಯುತ್ತದೆ. ಆದರೆ ಬೇರೆಯವರಿಗಾಗಿ ಬದುಕುವವನನ್ನು ಸದಾ ಸ್ಮರಿಸುತ್ತಾರೆ ಎಂದರು. ಶಿಕ್ಷಕರಿಗೆ ತಾವು ಕಲಿಸುವ ವಿಷಯದ ಬಗ್ಗೆ ಪ್ರೀತಿ ಇರಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಕರು ಎಷ್ಟು ತಿಳಿದುಕೊಂಡರೂ ಸಾಲದು. ತರಗತಿಗೆ ಹೋಗುವಾಗ ಕಲಿಸುವ ವಿಷಯದ ಬಗ್ಗೆ ಹೆಚ್ಚು ಓದಿಕೊಂಡಿರಬೇಕು. ವೃತ್ತಿ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಯ ಅಭಿರುಚಿ ಏನು ಎಂಬುದನ್ನು ಗುರುತಿಸಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಡಾ. ಎ.ಎಸ್.ಲಕ್ಷ್ಮೀಶ್, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್, ಕೆ.ವೆಂಕಟೇಶ್ ಕವಲಕೋಡು, ಸತ್ಯನಾರಾಯಣ, ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಗದೀಶ ಒಡೆಯರ್, ಡಾ. ಬಿ.ಸಿ.ಶಶಿಧರ್, ಡಾ. ಎಚ್.ಎಂ.ಶಿವಕುಮಾರ್, ಕೆ.ವೆಂಕಟೇಶ್ ಇತರರಿದ್ದರು.
ಚಿಂತನೆಗಳು ಮಾರ್ಗದರ್ಶಿ ಡಾ. ಗುರುರಾಜ ಕರಜಗಿಯವರು ತಮ್ಮ ಬರಹ ಮತ್ತು ಉಪನ್ಯಾಸಗಳಿಂದ ಸಮಾಜಕ್ಕೆ ಜೀವನ ಪಾಠ ಮತ್ತು ಸಂಸ್ಕೃತಿಯನ್ನು ರಾಜ್ಯಾದ್ಯಂತ ಬಿತ್ತುತ್ತಿದ್ದಾರೆ. ಅವರ ಚಿಂತನೆಗಳು ನಮ್ಮ ಬದುಕಿಗೆ ಮಾರ್ಗದರ್ಶಿ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು. ವಿಷಯಗಳನ್ನು ಅವರು ಸರಳ, ಶುದ್ಧವಾಗಿ ಮನದಟ್ಟು ಮಾಡುತ್ತಾರೆ. ಬದುಕು ಹೇಗಿರಬೇಕು ಎಂಬುದನ್ನು ಸರಳವಾಗಿ ಹೇಳುತ್ತ ಸುಸಂಸ್ಕೃತ ಬದುಕಿಗೆ ಬೇಕಾಗುವ ಶಕ್ತಿಯನ್ನು ತುಂಬುತ್ತಿದ್ದಾರೆ. ಅವರು ಹೇಳಿರುವುದನ್ನು ಹೃದಯದಲ್ಲಿಟ್ಟುಕೊಂಡು ಅದೇ ರೀತಿ ಬದುಕಲು ಪ್ರಯತ್ನಿಸೋಣ ಎಂದರು. ಪುಣ್ಯದ ನೆಲವಿದು ಈ ದೇಶದ ಪ್ರಧಾನಿಯಾಗಿ ಜನರ ಮನಸ್ಸಿನಲ್ಲಿ ನೆಲೆ ನಿಂತ ಲಾಲ್ ಬಹಾದೂರ್ ಶಾಸ್ತ್ರಿ ಅವರು ಈ ಕಾಲೇಜಿಗೆ ಪಾದಸ್ಪರ್ಶ ಮಾಡಿರುವುದು ರೋಮಾಂಚನ ಉಂಟುಮಾಡುತ್ತದೆ. ಅವರು ಜೈಜವಾನ್-ಜೆಕಿಸಾನ್ ಘೋಷಣೆ ಮಾಡಿದವರು. ಈ ಕಾಲೇಜಿನ ಪ್ರಾಚಾರ್ಯರಾಗಿ ಗೋಪಾಲಕೃಷ್ಣ ಅಡಿಗರಿದ್ದರು. ಹಾಗೆಯೇ ಕಂಬಾರರು ಇದ್ದರು. ಇವರೆಲ್ಲ ಕೆಲಸ ಮಾಡಿದ ಪುಣ್ಯದ ನೆಲ ಇದು ಎಂದು ಡಾ. ಕರಜಗಿ ತಿಳಿಸಿದರು.