

ಕುಶಾಲನಗರ: ಅಭಿವೃದ್ಧಿ ಮತ್ತು ಕೌಶಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೊಡಗು ಜಿಲ್ಲೆಯ ಬಹುಕಾಲದ ಕನಸಾದ ಚಿಕ್ಕಅಳುವಾರ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳವಾರ ಬೆಂಗಳೂರಿನ ಜ್ಞಾನಜ್ಯೋತಿ ವಿಶ್ವವಿದ್ಯಾನಿಲಯದ ಸಭಾಂಗಣದಿಂದ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ನೂತನ ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ಕಾರ್ಯಾರಂಭವಾಗುವುದು ಐತಿಹಾಸಿಕ ಮೈಲುಗಲ್ಲಾಗಿದೆ. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಇಂದು 9 ಹೊಸ ವಿಶ್ವವಿದ್ಯಾಲಯಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಇರಬೇಕು, ಆ ಮೂಲಕ ಶೈಕ್ಷಣಿಕ ಅಸಮತೋಲನ ನಿರ್ಮೂಲನೆ ಆಗಬೇಕು, ಯುವಜನರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದಾಶಯದೊಂದಿಗೆ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂದರು.
ಸಾಂಕೇತಿಕ ಉದ್ಘಾಟನೆ: ಚಿಕ್ಕಅಳುವಾರ ಗ್ರಾಮದಲ್ಲಿ ವಿವಿ ಕ್ಯಾಂಪಸ್ ಅನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಕೊಡಗು ವಿವಿ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಮಾತನಾಡಿ, ಈ ನಾಡಿನ ಆಶೋತ್ತರಗಳಿಗೆ ಅನುಗುಣವಾಗಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಹಾಗೂ ಎಲ್ಲರ ಸಲಹೆ ಮತ್ತು ಸಹಕಾರದೊಂದಿಗೆ ಈ ವಿಶ್ವವಿದ್ಯಾನಿಲಯದ ಸರ್ವತೋಮುಖ ಶ್ರೇಯೋಭಿವೃದ್ಧಿಗಾಗಿ ನನ್ನ ನಾಲ್ಕು ವರ್ಷದ ಅವಧಿಯಲ್ಲಿ ಶ್ರಮಿಸಲಾಗುವುದು ಎಂದರು.
ಸಂಶೋಧನಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ವಿವಿಧ ಧನಸಹಾಯ, ಸಂಸ್ಥೆಗಳಿಂದ ಯೋಜನೆಗಳನ್ನು ಪಡೆಯಲು ಕ್ರಮ ವಹಿಸಲಾಗುವುದು ಎಂದರು. ಸರ್ಕಾರದ ಜನಪ್ರತಿನಿಧಿಗಳು ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಹಾಗೂ ಸಹಕಾರದೊಂದಿಗೆ ನೂತನ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದರು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕ ಕೆ.ಜಿ.ಬೊಪ್ಪಯ್ಯ, ಕೊಡಗು ಜಿಲ್ಲಾ ವ್ಯಾಪ್ತಿಗೆ ಬರುವ ವಿವಿಧ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರು, ಇತರರು ವರ್ಚುವಲ್ ಮೂಲಕ ಭಾಗವಹಿಸಿದ್ದರು.
ಚಿಕ್ಕಅಳುವಾರ ಗ್ರಾಮದ ಕಾಲೇಜು ಏರ್ಪಡಿಸಿದ್ದ ವಿ.ವಿ.ಯ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹೇಶ್, ಸದಸ್ಯರು, ಕೊಡಗು ವಿಶ್ವವಿದ್ಯಾಲಯದ ಸಂಯೋಜಿತ ಮತ್ತು ಘಟಕ ಪದವಿ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಜರಿದ್ದು ಆನ್‌ಲೈನ್ ಮೂಲಕ ಮುಖ್ಯಮಂತ್ರಿಗಳ ಸಮಾರಂಭ ವೀಕ್ಷಿಸಿದರು.