

ಹುಲಸೂರು: ಪಟ್ಟಣದ ಹೊರವಲಯದಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಸದಸ್ಯ ಶಶಿಧರ ಕೋಸಂಬೆ ದಿಢೀರ್ ಭೇಟಿ ನೀಡಿ, ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.
ಬೆಳಗ್ಗೆ 8.30ಕ್ಕೆ ವಸತಿ ಶಾಲೆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ 200ಕ್ಕೂ ವಿದ್ಯಾರ್ಥಿಗಳು ಬಯಲಿನಲ್ಲಿ ಅಭ್ಯಾಸ ಮಾಡುತ್ತಿದ್ದರು. ವಾರ್ಡನ್, ಡಿ ಗ್ರೂಪ್ ನೌಕರ ಹೊರತುಪಡಿಸಿದರೆ ಶಿಕ್ಷಕರು ಇರಲಿಲ್ಲ. ಶುದ್ಧ ಕುಡಿಯುವ ನೀರಿಲ್ಲದಕ್ಕೆ ವಾರ್ಡನ್ನನ್ನು ತರಾಟೆಗೆ ತೆಗೆದುಕೊಂಡರು.
ಅಡುಗೆ ಮನೆಯಲ್ಲಿ ಕೊಳೆತ ಟೊಮ್ಯಾಟೊ, ತರಕಾರಿ ಕಂಡು `ಇಂತಹದ್ದು ಮಕ್ಕಳಿ ತಿನಿಸಿದರೆ ಗತಿ ಏನು?. ವಿದ್ಯಾರ್ಥಿಗಳು ವಾಂತಿ, ಭೇದಿ ಪ್ರಕರಣ ನಡೆಯುತ್ತಿವೆ. ಇಂಥ ಆಹಾರ ನೀಡಿದರೆ ಹೇಗೆ ಎಂದು ಕಿಡಿ ಕಾರಿದರು. 9.45 ಆದರೂ ಶಿಕ್ಷಕರು ಬಾರದೆ ಇರುವುದು ಕಂಡು ಮಕ್ಕಳಿಗೆ ಪ್ರಾರ್ಥನೆ ಗೀತೆ ಹಾಡಿ, ತರಗತಿ ಕೋಣೆಗೆ ತೆರಳಿದರು.
ವಸತಿ ಶಾಲೆಯಲ್ಲಿ 13 ಶಿಕ್ಷಕರಿದ್ದು, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಪ್ರಾಂಶುಪಾಲರ ವಸತಿ ನಿಲಯವಿದ್ದರೂ ಉಳಿಯುತ್ತಿಲ್ಲ. ಮಕ್ಕಳ ಸ್ನಾನಕ್ಕೆ ಬಿಸಿ ನೀರು ಕೊಡುತ್ತಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಇಲ್ಲಿ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಕರೆ ಮಾಡಿ, ಒತ್ತಾಯಿಸಿದರು.
ಚಿಟಗುಪ್ಪ ತಾಲೂಕಿನ ಬೋರಾಳ ಗ್ರಾಮದ ವಸತಿ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮುರಾರ್ಜಿ ವಸತಿ ಶಾಲೆಗಳ ಪ್ರಾಂಶುಪಾಲ ಹಾಗೂ ವಾರ್ಡನ್ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಸದಸ್ಯರ ನಿರ್ದೇಶನದಂತೆ ಪ್ರಾಂಶುಪಾಲ ಸೇರಿ 13 ಶಿಕ್ಷಕರನ್ನು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಯಿತು.