

ಹಾಸನ : ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಪ್ರಜ್ಞೆ ಶಿಸ್ತು, ಸಂಯಮ, ಜವಾಬ್ದಾರಿಯನ್ನು ಅರಿತುಕೊಳ್ಳಲು ಸ್ಟುಡೆಂಟ್ ಪೊಲೀಸ್ ಕೆಡಿಟ್ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ಡಿ ಎ ಆರ್ ಹೊಸ ಲೈನ್ ರಸ್ತೆಯಲ್ಲಿರುವ ಪೋಲಿಸ್ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಾಯಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ, ಹಾಗಾಗಿ ಇಂದಿನಿಂದಲೇ ಪ್ರಯತ್ನವನ್ನು ಪ್ರಾರಭಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸ್ನೇಹ ಸಂಬಂಧ ಹಾಗೂ ಕಾನೂನು ಪಾಲನೆ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ಈ ಕಾರ್ಯಕ್ರಮ ಕೇರಳ ರಾಜ್ಯದಲ್ಲಿ ಪ್ರಥಮವಾಗಿ ಪರಿಚಯ ಮಾಡಲಾಯಿತು. ಇಂದು ದೇಶದ ಪ್ರತಿ ರಾಜ್ಯದಲ್ಲಿನ ಜಿಲ್ಲೆಗಳ ನಿರ್ದಿಷ್ಟ ಶಾಲೆಗಳನ್ನು ಗುರುತಿಸಿ ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಲಾಗುತ್ತಿದೆ ಎಂದರು.
ನಾವು ಈಗಾಗಲೇ 20 ಶಾಲೆಗಳನ್ನು ಗುರುತಿಸಲಾಗಿದ್ದು ಮಕ್ಕಳಿಗೆ ಆತ್ಮರಕ್ಷಣೆ, ಶಿಸ್ತು ಇತ್ಯಾದಿಗಳ ಬಗ್ಗೆ ತರಬೇತಿ ನೀಡಲು ಪ್ರತಿ ಶಾಲೆಗೆ ತಲಾ 50,000 ರೂಪಾಯಿಗಳನ್ನು ನೀಡಲಾಗುವುದು. ಆಯ್ಕೆಯಾದ ಎಲ್ಲಾ ಶಾಲಾ ಮಕ್ಕಳಿಗೆ ಪೊಲೀಸ್ ಡ್ರಿಲ್‌ಗಳು ಮತ್ತು ಮಾರ್ಚ್ ಪಾಸ್ಟ್‌ಅನ್ನು ಸಹ ಪರಿಚಯಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಜೀವರಕ್ಷಣೆ ಹಾಗೂ ಆತ್ಮಸ್ತೈರ್ಯ ಹೆಚ್ಚಾಗುತ್ತದೆ. ಅಲ್ಲದೆ ಈ ರೀತಿ ಕಾರ್ಯಕ್ರಮಗಳ ಮೂಲಕ ಗಣರಾಜ್ಯೋತ್ಸವ ಹಾಗೂ ಸ್ವತಂತ್ರೋತ್ಸವ ಸಮಾರಂಭ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.
ಯಾವುದೇ ಸಮಸ್ಯೆ ಇರಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಶಿಕ್ಷಕರ ಬಳಿ ಹೇಳುವ ದೈರ್ಯ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸಮಾಜವನ್ನು ಎದುರಿಸಲು ಸಾದ್ಯ ಎಂದರು
ಮುಖ್ಯ ಅಥಿತಿಗಳಾಗಿ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾಜಿಕ ಪ್ರಜ್ಞೆ ಬಹಳ ಮುಖ್ಯ. ಸಮಾಜದಲ್ಲಿ ಸಾಮಾಜಿಕ ಪ್ರಗತಿಯನ್ನು ಬೆಳೆಸಲು ಪೊಲೀಸ್ ಇಲಾಖೆ ಒಂದರಿಂದ ಸಾಧ್ಯವಿಲ್ಲ ಅವರ ಜೊತೆ ಪ್ರತಿಯೊಬ್ಬ ನಾಗರೀಕನೂ ಕೈಜೋಡಿಸಬೇಕು ಎಂದರು.
ಈಗಾಗಲೆ ಹಲವೆಡೆ ಸಾಕಷ್ಟು ಬಾಲ್ಯವಿವಾಹ, ಲೈಂಗಿಕ ಕಿರುಕುಳ, ಅಪಗಾತ, ಅತ್ಯಾಚಾರ, ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ನಾಗರೀಕರು ಪ್ರಜ್ಞಾವಂತರಾಗಿ ಸಮಾಜದ ವ್ಯವಸ್ಥೆಯನ್ನು ಉತ್ತಮವಾಗಿ ಕಾಪಾಡಬೇಕು, ಆದ್ದರಿಂದಲೆ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಸಮಾಜದಲ್ಲಿ ಸದೃಢವಾಗಿ ದೈರ್ಯದಿಂದ ಸತ್ಪ್ರಜೆಯಂತೆ ಬಾಳಲು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯರ್ಥಿನೀಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಎಸ್‌ಐ ಕುಮಾರ್ ಪ್ರಾಸ್ಥಾವಿಕ ನುಡಿಗಳ್ಳನ್ನಾಡಿದರು, ದೈಹಿಕ ಶಿಕ್ಷಣದ ಹಿರಿಯ ಶಿಕ್ಷಕ ವೇದಣ್ಣ ಮಾತನಾಡಿದರು.
ಹಾಸನದ ಡಿವೈಎಸ್‌ಪಿ ಉದಯ್ ಬಾಸ್ಕರ್ , ಸಕಲೇಶಪುರ ತಾಲೂಕಿನ ಡಿವೈಎಸ್‌ಪಿ ಮಿಥುನ್, ದೈಹಿಕ ಶಿಕ್ಷಣದ ಶಿಕ್ಷಕರು, ವಿದ್ಯಾರ್ಥಿಗಳು ಇತರರು ಇದ್ದರು.