

ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದ ಜೆಎಸ್‌ಎಸ್ ಅಂತರ ಶಾಲಾ- ಕಾಲೇಜುಗಳ ಸಾಂಸ್ಕೃತಿಕ ಮೇಳದಲ್ಲಿ ವಿದ್ಯಾರ್ಥಿಗಳ ದೇಸಿ ಕಲೆ, ನೃತ್ಯ ವೈಭವ ಆಕರ್ಷಿಸಿದವು.
ವಸ್ತುಪ್ರದರ್ಶನ ಆವರಣದ ಮುಖ್ಯ ಪ್ರಾಂಗಣದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ಜಾತ್ರೆ ಆರಂಭದ ದಿನದಿಂದಲೂ ಸಾಂಸ್ಕೃತಿಕ ರಸದೌತಣ ಉಣಬಡಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ನೃತ್ಯದ ಮೋಡಿಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಸಿನಿಮಾ ಹಾಡು ಹಾಗೂ ಪಾಶ್ಚಿಮಾತ್ಯ ಸಂಗೀತಕ್ಕೆ ಅವಕಾಶವಿಲ್ಲ. ಅಪ್ಪಟ ದೇಸಿ ಸೊಗಡಿನ ಜನಪದ, ಶಾಸ್ತ್ರೀಯ ಹಾಗೂ ವಚನಾಧಾರಿತ ಹಾಡುಗಳಿಗೆ ಮಾತ್ರ ನೃತ್ಯ ಪ್ರದರ್ಶನ ಸೀಮಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ನಾನಾ ಪ್ರಕಾರದ ನೃತ್ಯ ಸಿರಿಯನ್ನು ಸಾದರಪಡಿಸುತ್ತಿದ್ದಾರೆ.
ಪೂಜಾ ಕುಣಿತ, ಪಟ ಕುಣಿತ, ಕಂಸಾಳೆ, ವಚನಾಧಾರಿತ ನೃತ್ಯ ಸೇರಿದಂತೆ ಜನಪದ ಕಲೆಯ ಮೋಡಿ ಮಾಡುತ್ತಿದ್ದಾರೆ. ನಾಲ್ಕು ದಿನಗಳಿಂದ ಸಾಂಸ್ಕೃತಿಕ ಮೇಳ ಬೆಳಗ್ಗೆ 9ಕ್ಕೆ ಆರಂಭಗೊಂಡರೆ ರಾತ್ರಿ 9ರ ವರೆಗೆ ನಡೆಯುತ್ತಿದೆ. ಜಾತ್ರೆಗೆ ಆಗಮಿಸಿದವರಿಗೆ ಈ ಮೇಳ ಭರಪೂರ ಮನರಂಜನೆಯ ಕೇಂದ್ರವಾಗಿದೆ.
ಸುತ್ತೂರು ಜೆಎಸ್‌ಎಸ್ ಉಚಿತ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಣಿಪುರ, ಮೇಘಾಲಯ, ತೆಲಂಗಾಣ ವಿದ್ಯಾರ್ಥಿಗಳ ಸೊಗಸಾದ ನೃತ್ಯ ನೋಡುಗರ ಸೆಳೆಯುತ್ತಿದೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬಡಕಟ್ಟು ಜನರ ಜೀವನಶೈಲಿಯ ಕಲಾ ಪ್ರಕಾರಗಳನ್ನು ಪ್ರಸ್ತುತಿಪಡಿಸಿದ್ದಾರೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ವೈದ್ಯಕೀಯ, ವೃತ್ತಿಪರ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕಾಲೇಜುಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
5 ವಿಭಾಗದಲ್ಲಿ ಪ್ರಶಸ್ತಿ: ಸಮೂಹ ಶಾಸ್ತ್ರೀಯ ನೃತ್ಯ, ಸಮೂಹ ಗಾಯನ, ಸಮೂಹ ನೃತ್ಯ, ವಚನಾಧಾರಿತ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ ಪ್ರಕಾರದ ಐದು ವಿಭಾಗದಲ್ಲಿ ಪ್ರತಿದಿನ ಸ್ಪರ್ಧೆ ನಡೆಸಲಾಗುತ್ತಿದೆ. ಪ್ರತಿ ವಿಭಾಗದಲ್ಲೂ ಐದು ತಂಡಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿದಿನ ಒಂದು ತಂಡವನ್ನು ಪರ್ಯಾಯ ಪಾರಿತೋಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ವಿಜೇತ ತಂಡಗಳು ಜಾತ್ರೆಯ ಕೊನೆಯ ದಿನವಾದ ಸೋಮವಾರ ಮುಂಜಾನೆ ಗದ್ದುಗೆ ಆವರಣದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ತಿರುಳು ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ರಂಜಿಸಲಿದ್ದಾರೆ.