

ಬೀದರ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸರ್ಕಾರಿ ಶುಶ್ರೂಷಾ ಶಾಲೆ ಹಾಗೂ ಶ್ರೀ ಶಾರದಾ ಶುಶ್ರೂಷಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಕಾಲ್ನಡಿಗೆ ಜಾಥಾ ನಡೆಸಿದರು.
ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಬೋಲೋ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತ ಬ್ರಿಮ್ಸ್ ಆಸ್ಪತ್ರೆಯಿಂದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್‍ಸಿಂಗ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಸರ್ಕಾರಿ ಶುಶ್ರೂಷಾ ಶಾಲೆವರೆಗೆ ಜಾಥಾ ನಡೆಸಿದರು.
ಸಾರ್ವಜನಿಕರಲ್ಲಿ ದೇಶಾಭಿಮಾನ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಶುಶ್ರೂಷಾ ಶಾಲೆ ಪ್ರಾಚಾರ್ಯ ರಾಜಕುಮಾರ ಮಾಳಗೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ ಜಾಥಾಕ್ಕೆ ಚಾಲನೆ ನೀಡಿದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಅನಿಲಕುಮಾರ ಚಿಂತಾಮಣಿ, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.