

ಬೀದರ್: ಸ್ವಚ್ಛತೆಯೇ ಸೇವೆ ಅಭಿಯಾನ ಪ್ರಯುಕ್ತ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ತಾಲೂಕಿನ 18 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಬಕಚೌಡಿ, ಬೆಳ್ಳೂರ್, ಆಣದೂರ, ಸಿಕೇನಪುರ, ಆಣದೂರವಾಡಿ, ಕಮಲಾಪುರ, ಕೊಳಾರ(ಬಿ), ಅತಿವಾಳ, ಸಂಗೋಳಗಿ, ನೆಲವಾಡ, ಬಾವಗಿ, ಸಿರ್ಸಿ(ಎ), ಖಾಶೆಂಪುರ, ಮಂದಕನಳ್ಳಿ, ಕಂಗನಕೋಟ, ಶಮಶೀರನಗರ ಹಾಗೂ ಕಮಠಾಣಗಳಿಗೆ ತೆರಳಿ ಮಂದಿರ, ಮಸೀದಿ, ಚರ್ಚ್, ಆಸ್ಪತ್ರೆ, ಶಾಲೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಿದರು. 700 ವಿದ್ಯಾರ್ಥಿಗಳು ವೈಯಕ್ತಿಕ, ಮನೆ, ಓಣಿ ಹಾಗೂ ಗ್ರಾಮದ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಶ್ರಮದಾನದ ನಂತರ ಸ್ವಚ್ಛತೆಗಾಗಿ ಸ್ವಂತ ಹಣದಲ್ಲಿ ಖರೀದಿಸಿ ತಂದಿದ್ದ ಕಿಟ್ ಗಳನ್ನು ಆಯಾ ಪ್ರಾರ್ಥನಾ ಮಂದಿರ, ಆಸ್ಪತ್ರೆ ಹಾಗೂ ಶಾಲೆ ಮುಖ್ಯಸ್ಥರಿಗೆ ಒಪ್ಪಿಸಿದರು.
ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಸಾಮಾಜಿಕ ಚಟುವಟಿಕೆ ಭಾಗವಾಗಿ ಸ್ವಂತ ಖರ್ಚಿನಲ್ಲಿ 18 ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಂಡ ಶಾಹೀನ್ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಶಾಹೀನ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಮಾಜ ಸೇವೆ ಶಿಕ್ಷಣ ಸಹ ಕೊಡುತ್ತಿದೆ. ಅವರಲ್ಲಿ ಸೇವಾ ಮನೋಭಾವ ಬೆಳೆಸುತ್ತಿದೆ. ಇದರ ಪರಿಣಾಮ ಮಕ್ಕಳು ಸ್ವಚ್ಛತೆ, ನೀರು, ಪರಿಸರ ಸಂರಕ್ಷಣೆ, ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ಜಾಗೃತಿ ಮೊದಲಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಜಿಪಂ ಸಿಇಒ ಶಿಲ್ಪಾ ಎಂ., ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್, ಪ್ರಮುಖರಾದ ಶರಣಪ್ಪ ಮಿಠಾರೆ, ಡಾ.ಬಸವರಾಜ ಬಲ್ಲೂರ, ವಿರೂಪಾಕ್ಷ ಗಾದಗಿ, ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಶಿವಶಂಕರ ಟೋಕರೆ, ಎಂ.ಎಸ್. ಮನೋಹರ, ರೂಪಾ ಪಾಟೀಲ್, ಜಗನ್ನಾಥ ಮೂರ್ತಿ, ರಾಜಶೇಖರ ಮಠ, ಬಾಬುರಾವ್ ದಾನಿ, ವಿಜಯಕುಮಾರ ಸೋನಾರೆ, ಭಾರತಿ ವಸ್ತ್ರದ್, ಜಯದೇವಿ ಯದಲಾಪುರೆ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಜಗನ್ನಾಥ ಕಮಲಾಪುರೆ, ಜಗನ್ನಾಥ ಶಿವಯೋಗಿ, ವೀರಶೆಟ್ಟಿ ಚನಶೆಟ್ಟಿ, ರಾಜಕುಮಾರ ಮಣಗೇರಿ, ರಮೇಶ ಬಿಡವೆ ಪಾಲ್ಗೊಂಡಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಶಾಹೀನ್ ಕಾಲೇಜು ಪ್ರಾಚಾರ್ಯ ಖಾಜಾ ಪಟೇಲ್ ವಂದಿಸಿದರು.