

ಬೇಲೂರು: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅವರು ಮುಂದಿನ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಪ್ರಶಸ್ತಿ ಪಡೆಯಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ಪಟ್ಟಣದ ಸರ್ವೋದಯ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ವೋದಯ ವಿದ್ಯಾ ಸಂಸ್ಥೆ, ಬೇಲೂರು ವಾಲಿಬಾಲ್ ಕ್ಲಬ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ 2023-24ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಅಭಿನಂದಿಸಲು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ. ಅದನ್ನು ಗುರುತಿಸಿ ಹೊರ ತಂದಾಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ. ಅಂಗವಿಕಲರಿಗೂ ಕ್ರೀಡಾ ಕ್ಷೇತ್ರದಲ್ಲಿ ಅವಕಾಶವಿದ್ದು, ಅವರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.
ಬೇಲೂರು ವಾಲಿಬಾಲ್ ಕ್ಲಬ್ ಅಧ್ಯಕ್ಷ ಸಂತೋಷ ಮಾತನಾಡಿದರು. ಸರ್ವೋದಯ ಶಾಲೆ ಸಂಸ್ಥಾಪಕ ಪ್ರಕಾಶ್, ವಾಲಿಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾಬು ಪ್ರಸಾದ್, ಕಾರ್ಯದರ್ಶಿ ಆನಂದ್, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಂಮತ್, ಬಿಆರ್‌ಸಿ ಶಿವಮರಿಯಪ್ಪ ಸೇರಿದಂತೆ ಇತರರಿದ್ದರು.