ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿ

SRP _30-01jpg
Published on

ಶ್ರೀರಂಗಪಟ್ಟಣ: ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿದಲ್ಲಿ ಆ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ತಿಳಿಸಿದರು.


ಪಟ್ಟಣದ ಸಮೀಪದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪ್ರಸ್ತುತ ಮಕ್ಕಳ ಬುದ್ಧಿವಂತಿಕೆ ಹಾಗೂ ಜ್ಞಾನಶಕ್ತಿ ಅಪರಿಮಿತವಾಗಿದೆ. ಹೀಗಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಅವರಲ್ಲಿ ನಾವು ಜಾಗೃತ ಕಲಿಕೆಯನ್ನು ನೀಡಬೇಕಿದೆ. ವಿವಿಧ ರೀತಿಯ ಛದ್ಮವೇಷ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿರುವ ವಿದ್ಯಾರ್ಥಿಗಳು ಆಯಾ ವೇಷಗಳಿಗೆ ತಕ್ಕಂತೆ ಪರಕಾಯ ಪ್ರವೇಶಿಸಿ ಪ್ರದರ್ಶನ ನೀಡಿರುವುದ ಹರ್ಷ ತರಿಸಿದೆ. ಶಿಕ್ಷಕರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿದರೆ, ಮುಂದೆ ನಿಮ್ಮಿಂದ ಆ ಮಕ್ಕಳು ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿವರ್ ವ್ಯಾಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಆದರ್ಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಹಾಗೂ ಮಕ್ಕಳ ಪಾಲಕರು ಸಹ ಅವರ ಶಿಕ್ಷಣ, ಕ್ರೀಡೆ ಹಾಗೂ ಕೌಶಲ, ಪ್ರತಿಭೆಗಳ ತರಬೇತಿ ಜತೆಗೆ ಮಾನವ ಸಂಬಂಧಗಳ ಅರ್ಥ, ಪ್ರೀತಿ, ಸಂಸ್ಕೃತಿ, ಗೌರವ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಿ ಅವರಲ್ಲಿ ಭಾವನಾತ್ಮಕ ಅಂಶಗಳನ್ನು ಮೈಗೂಡಿಸಬೇಕಿದ್ದು, ಆಧುನಿಕತೆ ಹೆಸರಲ್ಲಿ ಇಂದಿನ ಯುವಜನ ಸೇರಿದಂತೆ ನಮ್ಮಲ್ಲಿ ನಶಿಸುತ್ತಿರುವ ಮಾನವೀಯತೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.


ಕ್ಷೇತ್ರ ಶಿಕ್ಷಣ ಸಂಯೋಜಕಿ ಬಿ.ಕೆ.ಪ್ರತಿಮಾ, ರಿವರ್ ವ್ಯಾಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ನಮ್ರತಾ ಉಪಸ್ಥಿತರಿದ್ದರು. ಈ ವೇಳೆ ಶಾಲಾ ಶಿಕ್ಷಕರು ಸೇರಿದಂತೆ ಆಡಳಿತ ಮಂಡಳಿ ಇದ್ದರು.

ಶ್ರೀರಂಗಪಟ್ಟಣ ಸಮೀಪದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಉದ್ಘಾಟಿಸಿದರು. ರಿವರ್ ವ್ಯಾಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಆದರ್ಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net