

ಭಾಲ್ಕಿ: ವಿದ್ಯಾರ್ಥಿಗಳು ಸಾಧಿಸುವ ಛಲ, ದೂರದೃಷ್ಟಿ ಮತ್ತು ದೃಢ ಸಂಕಲ್ಪ ಅಳವಡಿಸಿಕೊಂಡರೆ ಜೀವನದಲ್ಲಿ ಅಂದು ಕೊಂಡಿದ್ದನ್ನು ಸಾಧಿಸಬಹುದು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಮತ್ತು ಗುರಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಸಮಯ ಮತ್ತು ಅವಕಾಶ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ನೀವೇನಾಗಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಬೇಕು. ಇದರಿಂದ ನಿಮ್ಮ ಮುಂದಿನ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಗೆ ಸೀಮತ ಆಗಬಾರದು. ಉತ್ತಮ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಎಲ್ಲರೂ ಪಡೆಯುವಂತಾಗಬೇಕು. ಆ ದಿಸೆಯಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರ ಜೀವನವೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಬೇಕು. ಅವರು ಬಡತನದಲ್ಲಿ ಸಾಕಷ್ಟು ನೋವು ಕಷ್ಟ ಅನುಭವಿಸಿ ಅದ್ಭುತ ಸಾಧನೆ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರು ಕಲ್ಯಾಣ ಕರ್ನಾಟಕ ಭಾಗದ ಅಮೂಲ್ಯ ರತ್ನ ಆಗಿದ್ದಾರೆ ಎಂದು ಬಣ್ಣಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸೂರ್ಯ ಫೌಂಡೇಷನ್ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ಯುವ ಉದ್ಯಮಿ ವಿವೇಕ ದೀಪಕ ವಾಲಿ, ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಪ್ರಾಚಾರ್ಯರಾದ ಪಿ.ರಾಜು, ರಂಗಾರೆಡ್ಡಿ, ಮುಖ್ಯಗುರು ಮಹೇಶ ಮಹಾರಾಜ ಇತರರಿದ್ದರು.
ಪ್ರಾರ್ಥನಾ ಶೈಲೇಶ ಪಾಟೀಲ್ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಣೆ ಮಾಡಿದರು. ಪ್ರವೀಣ ಖಂಡಾಳೆ ವಂದಿಸಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಿದ ವಿದ್ಯಾಸಂಸ್ಥೆ ರಾಜ್ಯದಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಪಾಲಕರ ಪ್ರೋತ್ಸಾಹ, ಶಿಕ್ಷಕರ ಪರಿಶ್ರಮ ದೊಡ್ಡದಿದೆ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಶರೀರ, ಮನಸ್ಸು ಶುದ್ಧವಾಗಿರಿಸಿಕೊಂಡು ಸಂಸ್ಥೆಯಲ್ಲಿ ಕಲಿತ ಉತ್ತಮ ಸಂಸ್ಕಾರ, ಚಾರಿತ್ರÈ ಜೀವನದುದ್ದಕ್ಕೂ ಮುಂದುವರೆಸಿಕೊಂಡು ಹೋಗಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು
ಹಿರೇಮಠ ಸಂಸ್ಥಾನ ಭಾಲ್ಕಿ
ಗ್ರಾಮೀಣ ಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾಕೇಂದ್ರ ತೆರೆದು ಶೈಕ್ಷಣಿಕ ಕ್ರಾಂತಿಗೈಯುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಪೂಜ್ಯರು ಮತ್ತು ಕಲಿತ ಸಂಸ್ಥೆ, ಶಿಕ್ಷಕರನ್ನು ಎಂದಿಗೂ ಮರೆಯಬಾರದು.
|ಡಾ.ಶರಣಪ್ಪ ಎಸ್., ಕಲಬುರಗಿ ನಗರ ಪೊಲೀಸ್ ಆಯುಕ್ತರು ಕಲಬುರಗಿ
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಾದ ಈಶ್ವರ ವಿಜಯಕುಮಾರ, ಹರ್ಷಿತಾ ಶಿವಕುಮಾರ, ಶ್ರೀಲಕ್ಷ್ಮಿ ಶಿವರುದ್ರಯ್ಯ, ವೈಷ್ಣವಿ ರಮೇಶ, ಆಕಾಂಕ್ಷಾ ಮಿಥುನ ಸೇರಿದಂತೆ ಮುಂತಾವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ: ಚನ್ನಬಸವೇಶ್ವರ ಗುರುಕುಲ ಪರಿಸರದಲ್ಲಿ ಗಿಡನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಗಿಡಕ್ಕೆ ನೀರೆಯೆರದು ಕಾರ್ಯಕ್ಕೆ ಚಾಲನೆ ನೀಡಿದರು.