ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ಜ್ಞಾನ ಅಗತ್ಯ

HUN-JAN-11-1(PU COLLEGE PROGRAMME)
ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ.ಜಿ.ಅಚ್ಯುತ್‌ರಾವ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
Published on

ಹುಣಸೂರು: ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಜ್ಞಾನ ಮತ್ತು ಕೌಶಲತೆ ಅತ್ಯಗತ್ಯವೆಂದು ರೈಸ್ ಫೌಂಡೇಶನ್‌ನ ಜನಾಭಿವೃದ್ಧಿ ಪರಿಣಿತ ಡಾ.ಜಿ.ಅಚ್ಯುತ್‌ರಾವ್ ಅಭಿಪ್ರಾಯಪಟ್ಟರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ರೈಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸಾಧನೆಯಡೆಗೆ ನಮ್ಮ ನಡೆ-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕಲಿಕಾ ಪದ್ಧತಿಯ ಕುರಿತು ಗೊಂದಲಗಳಿವೆ. ಕಲಿಕಾ ನ್ಯೂನತೆಗಳನ್ನು ಸರಿಪಡಿಸಿಕೊಡುವವರು ಯಾರು ಎನ್ನುವ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಮೂಡುತ್ತ್ತದೆ. ಆದರೆ ಸಮಸ್ಯೆ ಮತ್ತು ಪರಿಹಾರ ಎರಡೂ ನಿಮ್ಮಲ್ಲೇ ಇದೆ. ನಮ್ಮ ಆಲೋಚನೆ, ವರ್ತನೆ ಮತ್ತು ನಡವಳಿಕೆಯಿಂದ ಬದಲಾವಣೆ ಆಗಬೇಕಿದೆ ಎಂದರು.

ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಜ್ಞಾನ ಬಹುಮುಖ್ಯ. ಜ್ಞಾನದ ಮೂಲಕ ಕೌಶಲತೆ ಹೊಂದಬೇಕು. ಅದರಿಂದ ಮನೋಭಾವನೆ ರೂಪುಗೊಳ್ಳಲು ಸಾಧ್ಯ. ಮನೋಭಾವವು ಪ್ರಾಮಾಣಿಕತೆ, ನಂಬಿಕೆ ಮತ್ತು ಸತತ ಪ್ರಯತ್ನವನ್ನು ಒಳಗೊಂಡಿದೆ. ಜ್ಞಾನದೊಂದಿಗಿನ ಕೌಶಲತೆ ಮಾತ್ರ ನಿಮ್ಮ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಲ್ಲದು ಎಂದರು.

ನೂತನ ಶಿಕ್ಷಣ ನೀತಿ ಶೇ.40ರ ಪ್ರಮಾಣದಲ್ಲಿ ಕೌಶಲತೆಗೆ ಮತ್ತು ಶೇ.60ರ ಪ್ರಮಾಣದ ವ್ಯಾಸಂಗಕ್ಕೆ ಮೀಸಲಿಟ್ಟಿದೆ. ಹಾಗಾಗಿ ಜ್ಞಾನದೊಂದಿಗಿನ ಕೌಶಲತೆಯಿದ್ದಲ್ಲಿ ಮಾತ್ರ ಸಮಾಜ ನಿಮ್ಮನ್ನು ಗುರುತಿಸಬಲ್ಲದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಪ್ರವೃತ್ತಿಯನ್ನು ರೂಪಿಸಿಕೊಳ್ಳಬೇಕೆಂದರು.

ಪ್ರಾಂಶುಪಾಲ ರಾಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರು ತಮ್ಮ ಸಂದೇಹ ಮತ್ತು ಕಲಿಕಾ ರೀತಿಯ ಕುರಿತು ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಂಡರು. ಕಾಲೇಜಿನ ಅಧ್ಯಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net