ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನದ ಕಿಚ್ಚು ಹಚ್ಚಿ

HUN-OCT-30-1(KASAPA PROGRAMME)
ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿಕಟಪೂರ್ವ ಅಧ್ಯಕ್ಷ ವೈ.ಡಿ.ರಾಜಣ್ಣ, ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ್ ಇತರರು ಇದ್ದರು.
Published on

ಹುಣಸೂರು: ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅಭಿಮಾನದ ಕಿಚ್ಚು ಹಚ್ಚುವ ಕಾರ್ಯವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಗಳು ಮಾಡಬೇಕಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಭಾಷೆಯನ್ನು ಪಂಪ, ರನ್ನರಾದಿಯಾಗಿ ಕುವೆಂಪು, ಕಾರಂತರು ಗಟ್ಟಿಯಾಗಿ, ಆಳವಾಗಿ ಮತ್ತು ಅರ್ಥಪೂರ್ಣವಾಗಿ ಬೆಳೆಸಿದ್ದಾರೆ. ಈಗ ನಾವು ಭಾಷೆಯನ್ನು ಉಳಿಸಬೇಕು. ಕೇವಲ ಸಭೆ ಸಮಾರಂಭಗಳು, ಸಾಹಿತ್ಯ ಸಮ್ಮೇಳನಗಳಿಂದ ಭಾಷೆ ಬೆಳವಣಿಗೆ ಸಾಧ್ಯವಿಲ್ಲ. ಕನ್ನಡ ಕಲಿಯುವಿಕೆ ಆಸಕ್ತಿದಾಯಕವಾಗಬೇಕು. ಶಾಲಾ, ಕಾಲೇಜುಗಳಲ್ಲಿ ವ್ಯಾಕರಣ, ಪ್ರಬಂಧ ಸೇರಿದಂತೆ ಕನ್ನಡ ಅರ್ಥಪೂರ್ಣ ಕಲಿಕೆ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡದ ಕಿಚ್ಚನ್ನು ವಿದ್ಯಾರ್ಥಿಗಳಲ್ಲಿ ತುಂಬಿದಲ್ಲಿ ಕನ್ನಡ ಭಾಷೆ ತನ್ನ ಈ ಹಿಂದಿನ ಸುವರ್ಣ ಯುಗ ಕಾಣಲು ಸಾಧ್ಯ ಎಂದು ಹೇಳಿದರು.

ಹಿಂದೆ ಸರಿಯದಿರಿ: ಕನ್ನಡಿಗರ ಅಸ್ಮಿತೆಯಾಗಿರುವ ಕಸಾಪ ಪದಾಧಿಕಾರಿಗಳು ತಮ್ಮ ಅಧಿಕಾರವನ್ನು ಜವಾಬ್ದಾರಿಯೆಂದು ಪರಿಗಣಿಸಿ ದುಡಿಯಬೇಕು. ಪ್ರತಿಯೊಬ್ವ ಶ್ರೀಸಾಮಾನ್ಯನಿಗೆ ಕನ್ನಡ ಹತ್ತಿರವಾಗಬೇಕು. ಕೇವಲ ಕೋಟಿ ಕಂಠ ಕಾರ್ಯಕ್ರಮದಿಂದ ಕನ್ನಡ ಉಳಿವು ಸಾಧ್ಯವಿಲ್ಲ. ಹೀಗಾಗಿ ಇಂತಹ ಕಾರ್ಯಕ್ರಮಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಬದಲಾಗಿ ಮೂಲಬೇರುಗಳನ್ನು ಭದ್ರಗೊಳಿಸುವ ಕಾರ್ಯದಿಂದ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ತಾಲೂಕು ಘಟಕವು ಯುವಕರು ಮತ್ತು ಅನುಭವಿಗಳ ಸಮ್ಮಿಳಿತದಿಂದ ಕೂಡಿದ್ದು ಕನ್ನಡದ ತೇರನ್ನು ಎಳೆಯಲು ಎಲ್ಲರೂ ಒಂದಾಗಿ ದುಡಿಯೋಣ. ಜಿಲ್ಲಾ ಘಟಕ ತಾಲೂಕಿನ ಕನ್ನಡ ಪರ ಕೆಲಸಕ್ಕೆ ಎಂದಿಗೂ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಮಾನಸಾ, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ಕಸಾಪ ಮಾಜಿ ಅಧ್ಯಕ್ಷರಾದ ನಂಜಮ್ಮ, ಎಸ್.ಜಯರಾಂ, ವಿ.ಪಿ.ಸಾಯಿನಾಥ್, ಎಸ್.ಉಮಾಪತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ ಇತರರು ಇದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net